ಹರಿಹರ: ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದಿಂದ ನಗರದ ಬೆಂಕಿ ನಗರ ಹಾಗೂ ಜೈಭೀಮ ನಗರಗಳ ಕೊಳೆಗೇರಿ ನಿವಾಸಿಗಳಿಗೆ ನಿರ್ಮಿಸುತ್ತಿರುವ ಮನೆಗಳನ್ನು ಬುಧವಾರ ಶಾಸಕ ಎಸ್. ರಾಮಪ್ಪ ಪರಿಶೀಲಿಸಿದರು.
ಮನೆಗಳ ನಿರ್ಮಾಣಕ್ಕೆ ಬಳಸುವ ಪರಿಕರಗಳು ನಿಗದಿತ ಗುಣಮಟ್ಟದಿಂದ ಕೂಡಿರಬೇಕು. ನಿರ್ಮಾಣ ಕಾರ್ಯ ವೈಜ್ಞಾನಿಕವಾಗಿ ನಡೆಯಬೇಕು. ಅವಸರವಸರದಲ್ಲಿ ಕಾಟಾಚಾರದ ಕಾಮಗಾರಿ ನಡೆಸಿದರೆ ಸಹಿಸಲಾಗದು ಎಂದು ರಾಮಪ್ಪ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕಡು ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ವಾಸಿಸುತ್ತಿದ್ದ ಜೋಪಡಿಗಳನ್ನು ತೆರವುಗೊಳಿಸಿ, ಸರ್ಕಾರ ಉತ್ತಮ ಗುಣಮಟ್ಟದ ಹಾಗೂ ಸುಂದರ ಮನೆಗಳನ್ನು ನಿರ್ಮಿಸಿಕೊಡುತ್ತಿದೆ. ಆಯಾ ಮನೆಗಳ ಮಾಲೀಕರು ಸಹ ಕಾಮಗಾರಿ ವೇಳೆ ಸ್ಥಳದಲ್ಲಿದ್ದು, ಪರಿಶೀಲಿಸಬೇಕು ಜೊತೆಗೆ ಕಾಮಗಾರಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಕೊಳೆಗೇರಿ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತ ಎಸ್.ಎಲ್ ಆನಂದಪ್ಪ ಮಾತನಾಡಿ, ಬೆಂಕಿ ನಗರದಲ್ಲಿ ಹಾಗೂ ಜೈಭೀಮ ನಗರದಲ್ಲಿ ಒಟ್ಟು 811 ಮನೆಗಳನ್ನು ನಿರ್ಮಿಸಲು ನಿಗಮ ಅನುಮತಿ ನೀಡಿದೆ. ಈಗಾಗಲೆ ಬೆಂಕಿನಗರದ 176, ಭೀಮಗರದ 112 ಜನ ಫಲಾನುಭವಿಗಳು ತಮ್ಮ ವಂತಿಗೆ ಹಣವನ್ನು ನಿಗಮಕ್ಕೆ ತುಂಬಿದ್ದಾರೆ. ಬೆಂಕಿ ನಗರದ 70, ಭೀಮ ನಗರದ 40 ಮನೆಗಳು ಚಾವಣಿ ಹಾಕುವ ಹಂತದಲ್ಲಿದ್ದರೆ, ಕ್ರಮವಾಗಿ 12, 40 ಮನೆಗಳು ಮುಕ್ತಾಯ ಹಂತದಲ್ಲಿವೆ ಎಂದರು.
ಮೈಕಾನ್ ಕಟ್ಟಡ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ಎಚ್.ಎಂ ಗೋಳಲೆ, ಯೋಜನಾ ಪ್ರಗತಿ ನಿರೀಕ್ಷಕರಾದ ಮಾರುತಿರಾವ್ ಮೇಲ್ಮನೆ, ವ್ಹಿ.ಪ್ರಾಣೇಶ ಆಚಾರ್, ಬೆಂಕಿ ನಗರದ ಮುಖಂಡರಾದ ಅನ್ಸ್‌ರ್ ಅಹ್ಮದ್, ಎಂ.ಎಸ್ ಬಾಬುಲಾಲ್, ನಗರಸಭಾ ಸದಸ್ಯ ಇಜಾಜಹ್ಮದ್, ಅಜ್ಗರಲಿ, ಆರ್ಪಿವುಲ್ಲಾ, ಶಫಿಅಹ್ಮದ್, ಮಹಾಂತೇಶ ಮತ್ತಿತರರಿದ್ದರು.