ಬೆಳ್ತಂಗಡಿ: ಮಂಗಳೂರು ಲೋಕಾಯಕ್ತ ಅಧಿಕಾರಿಗಳು ಇಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ತಾಲೂಕು ಕಚೇರಿ, ಶಿಶು ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಮೊದಲು ದಿಢೀರ್ ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆ ನಿರ್ವಹಣೆ ವಿಚಾರವಾಗಿ ಲೋಕಾಯಕ್ತ ಅಧಿಕಾರಿಗಳು ತಾಲೂಕು ಆರೋಗ್ಯಧಿಕಾರಿ ಮತ್ತು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ವೈದ್ಯರು ಬಾರದೆ ಇರುವುದು, ಸ್ವಚ್ಛತೆ ಇಲ್ಲದೆ ಇರುವುದನ್ನು ಗಮನಿಸಿ ಸರಿಪಡಿಸಲು ಸೂಚನೆ ನೀಡಿದ್ದಾರೆ, ಸರಕಾರಿ ಆಸ್ಪತ್ರೆಯ ನಿರ್ವಹಣೆ ವಿಚಾರವಾಗಿ ಸಾರ್ವಜನಿಕ ವಲಯದಿಂದ ಬಂದ ಹಲವು ದೂರುಗಳ ಆಧಾರದ ಮೇಲೆ ತಕ್ಷಣ ವ್ಯವಸ್ಥೆ ಸರಿಪಡಿಸದೆ ಇರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಲೋಕಾಯಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಶಿಶು ಅಭಿವೃದ್ಧಿ ಯೋಜನೆಯ ಮಾತೃಶ್ರೀ ಯೋಜನೆಯಡಿ ಮಾಸಿಕ ಐದು ಸಾವಿರ ರೂ. ನೀಡದೆ ಇದ್ದ ಬಗ್ಗೆ ಲೋಕಾಯಕ್ತಕ್ಕೆ ದೂರು ಬಂದ ಹಿನ್ನಲೆಯಲ್ಲಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಲೋಕಾಯಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕರ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿನೆ ನೀಡಿದರು.
ಭೇಟಿ ವೇಳೆ ಲೋಕಾಯಕ್ತ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಕಲಾವತಿ, ಡಿವೈಎಸ್ಪಿ ಚೆಲುವರಾಜ್, ಇನ್ಸ್‌ಪೆಕ್ಟರ್ ಅಮಾನುಲ್ಲಾ ಹಾಗೂ ಸಿಬಂದಿ ಹಾಜರಿದ್ದರು.