ಚಿಕ್ಕಬಳ್ಳಾಪುರ: ಬ್ಯಾಂಕಾಕ್‌ನಿಂದ ಹಿಂದಿರುಗಿ ಬಂದಿದ್ದ ವ್ಯಕ್ತಿಯೋರ್ವ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಇರಬಹುದೆಂದು ಭೀತಿಗೊಂಡು ನಗರದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೊರನಾ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಜಮ್ಸ್ ಸ್ಟೋನ್ ವ್ಯಾಪಾರಿ ಬ್ಯಾಂಕಾಕ್‌ಗೆ ತೆರಳಿ ಕಳೆದ ಮಾ.7 ರಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸ್ವಗ್ರಾಮ ಅಲ್ಲೀಪುರಕ್ಕೆ ಹಿಂದಿರುಗಿದ್ದಾನೆ. ಈ ವೇಳೆ ಆತನಲ್ಲಿ ಶಂಕಿತ ಕೊರಾನ ವೈರಸ್ ಲಕ್ಷಣಗಳು ಕಾಣಿಸಿಕೊಂಡು ಆರೋಗ್ಯದಲ್ಲಿ ತುಸು ಏರುಪೇರು ಕಂಡಿದೆ. ಭಯಭೀತನಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾನೆ.
ತಜ್ಞ ವೈದ್ಯರ ಪರಿಶೀಲನೆ: ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮುಂದಾಳತ್ವದಲ್ಲಿ ಜಿಲ್ಲಾಸ್ಪತ್ರೆಯ ನುರಿತ ವೈದ್ಯರು ಅಲ್ಲೀಪುರದ ವ್ಯಾಪಾರಿಯ ಆರೋಗ್ಯ ತಪಾಸಣೆ ನಡೆಸಿದ್ದು, ಕೊರೊನಾ ವೈರಸ್ ಲಕ್ಷಣ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಮನೆಗೆ ವಾಪಸು ಕಳಿಸಿದ್ದಾರೆ. ಜಮ್ಸ್ ಸ್ಟೋನ್ ವ್ಯಾಪಾರಿಯಾಗಿರುವ ಆತ ಸಾಕಷ್ಟು ಬಾರಿ ಬ್ಯಾಂಕಾಕ್‌ಗೆ ಹೋಗಿ ವಾಪಸ್ ಆಗಿದ್ದನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ತಿಳಿಸಿದರು.
ಸಾರ್ವಜನಿಕ ವಲಯದಲ್ಲಿ ಆತಂಕ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರದ ಜಮ್ಸ್ ವ್ಯಾಪಾರಿಗೆ ಶಂಕಿತ ಕೊರನಾ ವೈರಸ್ ಲಕ್ಷಣ ಕಾಣಿಸಿಕೊಂಡಿದೆ ಎಂದು ಸ್ವಯಂ ಆತನೆ ಜಿಲ್ಲಾಸ್ಪತ್ರೆಗೆ ಬಂದು ವೈದ್ಯರ ತಪಾಸಣೆಗೆ ಒಳಗಾದ ವಿಷಯ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೆಲಕಾಲ ಆತಂಕ ಮೂಡಿಸಿದರೂ ವೈದ್ಯರ ತಂಡ ವ್ಯಾಪಾರಿಯಲ್ಲಿ ಕೊರೊನಾ ವೈರಸ್ ಲಕ್ಷಣ ಇಲ್ಲ ಎಂದು ದೃಢಪಡಿಸಿದ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ನೆಮ್ಮದಿಯ ನಿಟ್ಟಿಸಿರು ಬಿಟ್ಟರು.
ಅಲ್ಲೀಪುರದಲ್ಲಿ 46 ಮಂದಿ ಮೇಲೆ ನಿಗಾ: ಜಮ್ಸ್ ಸ್ಟೋನ್ ವ್ಯಾಪಾರಿಗೆ ಕೊರೊನಾ ಲಕ್ಷ್ಮಣಗಳು ಇಲ್ಲದೇ ಇರುವುದನ್ನು ವೈದ್ಯರ ತಂಡ ದೃಢಪಡಿಸಿದ್ದರೂ ವಿದೇಶಕ್ಕೆ ಹೋಗಿ ಬಂದಿರುವುದರಿಂದ ವ್ಯಾಪಾರಿ ಜೊತೆಗೆ ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಜೊತೆಗೆ ವಿದೇಶಗಳಿಂದ ಬಂದಿರುವ ಒಟ್ಟು 46 ಮಂದಿ ಮೇಲೆ ಜಿಲ್ಲೆಯ ವೈದ್ಯರ ತಂಡ ನಿಗಾ ವಹಿಸಿ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ
ಉದಯವಾಣಿಗೆ ತಿಳಿಸಿದರು.
ಹಲವು ದಿನಗಳ ಹಿಂದೆ ಬ್ಯಾಂಕಾಕ್‌ನಿಂದ ಅಲ್ಲೀಪುರಕ್ಕೆ ವಾಪಸ್ ಬಂದಿರುವ ಜಮ್ಸ್ ಸ್ಟೋನ್ ವ್ಯಾಪಾರಿ ಶಂಕಿತ ಕೊರೊನಾ ವೈರಸ್ ಲಕ್ಷ್ಮಣ ಇದೆಯೆಂದು ಭಯ ಭೀತನಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ. ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ರೀತಿಯ ಲಕ್ಷಣಗಳು ಕಾಣಸಿಲ್ಲ. ಜಿಲ್ಲೆಯ ಒಟ್ಟು 46 ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
-ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ