ಬೆಂಗಳೂರು: ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಮೃತಪಟ್ಟ ಘಟನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ ವಿಕ್ರಂ ಜಯರಾಮ್ ನೇತೃತ್ವದ ತಜ್ಞರ ಸಮಿತಿ ಮಂಗಳವಾರ ಹೈಪರ್‌ಸೋನಿಕ್ ಆ್ಯಂಡ್ ಶಾಕ್‌ವೆವ್ ರಿಸರ್ಚ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದೆ.
ಪ್ರೊ ವಿಕ್ರಂಜಯರಾಮ್ ನೇತೃತ್ವದ ನಾಲ್ವರ ತಜ್ಞರ ಸಮಿತಿ ಮತ್ತು ನ್ಯಾಷನಲ್ ಏರೋನಾಟಿಕಲ್ ಲ್ಯಾಬರೇಟರಿ(ಎನ್‌ಎಎಲ್)ನ ಹಿರಿಯ ಅಧಿಕಾರಿಯೊಬ್ಬರು ಹಾಗೂ ಸಂಸ್ಥೆಯ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬೆಳಗ್ಗೆ 11 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಇಡೀ ತಂಡ ಘಟನೆಗೆ ನಿಖರ ಕಾರಣಗಳ ಬಗ್ಗೆ ಮಾಹಿತಿ ಕಲೆಹಾಕಿದೆ. ಪ್ರಯೋಗಾಲಯದಲ್ಲಿ ಯಾವ ರೀತಿಯ ಪ್ರಯೋಗ ನಡೆಯುತ್ತಿತ್ತು? ಯಾವ ರೀತಿಯ ಅನಿಲ ಬಳಕೆ ಮಾಡಲಾಗಿತ್ತು? ಪರೀಕ್ಷೆ ಸರಿಯಾಗಿ ನಡೆಯುತ್ತಿತ್ತೇ?
ಯಾವ ಕಂಪನಿಯಿಂದ ಜಲಜನಕ ಮತ್ತು ಆಮ್ಲಜನಕ ಸಿಲಿಂಡರ್‌ಗಳು ಬಂದಿವೆ? ಮತ್ತು ಸ್ಥಳದ ಚಿತ್ರಣವನ್ನು ಸಮಗ್ರವಾಗಿ ಅಧ್ಯಯನ ನಡೆಸಿತು. ಪ್ರಯೋಗಾಲಯದ ಮುಖ್ಯಸ್ಥ ಪ್ರೊ ಜಗದೀಶ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು.
ಜತೆಗೆ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅತುಲ್ಯ ಅವರಿಂದಲೂ ತಜ್ಞರ ಸಮಿತಿ ಸದ್ಯದರಲ್ಲೇ ಮಾಹಿತಿ ಪಡೆಯಲಿದೆ ಎಂದು ಅಧಿಕಾರಿ ವಿವರಿಸಿದರು.