Advertisement

ಬೀಡಿ ಕನಿಷ್ಠ ಕೂಲಿಗೆ ಒತ್ತಾಯ: ಪ್ರಚಾರ ಜಾಥಾ

11:28 AM Oct 14, 2018 | Team Udayavani |

ಮೂಡಬಿದಿರೆ: ಕರ್ನಾಟಕ ರಾಜ್ಯ ಸರಕಾರ ಕನಿಷ್ಠ ಕೂಲಿ ಕಾಯ್ದೆಯಡಿ ಸರ್ವಾನುಮತದಿಂದ ಘೋಷಿಸಿದಂತೆ, ಬೀಡಿ ಕಾರ್ಮಿಕರಿಗೆ ಕಳೆದ ಎ. 1ರಿಂದ ಸಾವಿರ ಬೀಡಿಗೆ 210 ರೂ. ಅನ್ನು ನೀಡಬೇಕಾಗಿರುವುದನ್ನು ಬೀಡಿ ಕಂಪೆನಿ ಮಾಲಕರು ಕೊಡದೆ ಸತಾಯಿಸುತ್ತಿರುವುದು ಸರಿಯಲ್ಲ. ಇದಕ್ಕಾಗಿ ಸಿಐಟಿಯು, ಎಐಟಿಯುಸಿ, ಬಿಎಂಎಸ್‌ ಮತ್ತು ಎಚ್‌ ಎಂಎಸ್‌ನೊಂದಿಗೆ ಸಂಯೋಜಿತವಾಗಿರುವ ಬೀಡಿ ಕಾರ್ಮಿಕರ ಸಂಘಟನೆಗಳು ಜಂಟಿಯಾಗಿ ಅ. 11ರಿಂದ 13ರ ವರೆಗೆ ಪ್ರಚಾರ ಜಾಥಾ ಹಮ್ಮಿಕೊಂಡಿದ್ದು, ಇದೇ ಅ. 23ರಂದು ಮಂಗಳೂರಿನಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹ ಏರ್ಪಡಿಸಲಾಗುವುದು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ತಿಳಿಸಿದರು.

Advertisement

ಮೂಡಬಿದಿರೆ ಬಸ್‌ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಬೀಡಿಗೆ ಕನಿಷ್ಠ ಕೂಲಿ ಜಾರಿಗೊಳಿಸಲು ಒತ್ತಾಯಿಸಿ ನಡೆದ ಪ್ರಚಾರ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸೌತ್‌ ಕೆನರಾ ಬೀಡಿ ವರ್ಕರ್ ಫೆಡರೇಶನ್‌ (ಸಿಐಟಿಯು) ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಸಿಪಿಎಂ ಜಿಲ್ಲಾ ಉಪಾಧ್ಯಕ್ಷೆ ರಮಣಿ, ಯಾದವ ಶೆಟ್ಟಿ ಸಿಐಟಿಯು ಪ್ರಮುಖರಾದ ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಎಸ್‌.ಕೆ. ಬೀಡಿ ವರ್ಕರ್ ಫೆಡರೇಶನ್‌ (ಎಐಟಿಯುಸಿ)ನ ಜಿಲ್ಲಾ ಮುಖಂಡರಾದ ಕರುಣಾಕರ, ಶೇಖರ್‌, ಸ್ಥಳೀಯರಾದ ರಾಧಾ, ಲಕ್ಷ್ಮೀ, ಬೇಬಿ ಮೊದಲಾದವರಿದ್ದರು.

ವೇಣೂರಿನಿಂದ ಆಗಮಿಸಿದ್ದ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ಸ್ಥಳೀಯ ಮುಖಂಡರು ಎದುರುಗೊಂಡರು. ಕಾರ್ಯಕರ್ತರು ಆಶಯಗೀತೆ ಹಾಡಿದರು. ಸಭೆಯ ಬಳಿಕ ವಾಹನ ಜಾಥಾ ಮೂಡಬಿದಿರೆಯಿಂದ ಕೈಕಂಬದತ್ತ ಸಾಗಿತು.

ತುಟ್ಟಿಭತ್ತೆ ನೀಡಿಲ್ಲ
ಬೆಲೆ ಏರಿಕೆಯ ಈ ದಿನಗಳಲ್ಲಿ ಬೀಡಿಗೆ ಕನಿಷ್ಠ 300 ರೂ. ಸಿಕ್ಕಿದರೂ ಸಾಲದು ಎಂಬ ಸ್ಥಿತಿ ಇದೆ. ಸರಕಾರ ಕನಿಷ್ಠ ಕೂಲಿ ಒದಗಿಸಿಕೊಡಲೊಪ್ಪಿ 6 ತಿಂಗಳೇ ಸಂದಿವೆ. ಈ ಅವಧಿಯ ಮೊತ್ತವನ್ನು ತಮ್ಮಲ್ಲೇ ಇರಿಸಿಕೊಂಡಿರುವ ಬೀಡಿ ಕಂಪೆನಿಗಳ ಮಾಲಕರು 2015ರ ಎಪ್ರಿಲ್‌ನಿಂದ ನೀಡಬೇಕಾಗಿದ್ದ ತುಟ್ಟಿಭತ್ತೆ 12.75 ರೂ. ಅನ್ನೂ ನೀಡದೆ ಸತಾಯಿಸುತ್ತಿದ್ದಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಬೀಡಿಗೆ ಸಾವಿರಕ್ಕೆ 300 ರೂ. ಕೊಟ್ಟರೂ ಸಾಲದು ಎಂದು ಬಾಲಕೃಷ್ಣ ಶೆಟ್ಟಿ ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next