ರಾಣಿಬೆನ್ನೂರ: ಕೊಪ್ಪಳದ ದೇವರಾಜ ಅರಸ ಮೆಟ್ರಿಕ್ ಪೂರ್ವ ಹಾಸ್ಟೇಲ್ನಲ್ಲಿ ಐವರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಸ್.ಸಿ. ಕುಲಕರ್ಣಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಇಲ್ಲಿನ ಅಂಚೆ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕೊಪ್ಪಳದ ದೇವರಾಜ ಅರಸ ಮೆಟ್ರಿಕ್ ಪೂರ್ವ ಹಾಸ್ಟೇಲ್ನಲ್ಲಿ ಐವರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ತೀವ್ರ ದುಃಖಕರ ಸಂಗತಿಯಾಗಿದೆ. ಸರ್ಕಾರಿ ಹಾಸ್ಟೇಲ್ಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎಂಬುದಕ್ಕೆ ಇದೊಂದು ಕೈಗನ್ನಡಿಯಾಗಿದೆ. ಇದಕ್ಕೆ ಹಾಸ್ಟೇಲ್ನಲ್ಲಿರುವ ಸಿಬ್ಬಂದಿ ವರ್ಗದವರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಜಿಲ್ಲಾ ಸಂಚಾಲಕ ಮಂಜು ಕೊಳ್ಳೇರ, ತಾಲೂಕ ಸಂಚಾಲಕ ರಾಘವೇಂದ್ರ, ಪಾಂಡು ಪಿ.ಜಿ., ಗೋಪಿ. ಎಂ.ಎಸ್., ರಾಹುಲ್ ಕೆ.ಪಿ., ವಿನಾಯಕ ಒ.ಎಂ., ಗುರುಮೂರ್ತಿ ಪಿ.ವೈ. ಟಿಪ್ಪು, ನಾಗರಾಜ ಸಂಗಪ್ಪನವರ, ಸೂರಜ್, ಐ, ಚಂದ್ರು ಹೊಸಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.