ಕಲಬುರಗಿ: ಕಳೆದ ಕೆಲ ದಿನಗಳಿಂದ ಭಾರಿ ಮಳೆ ಆಗುತ್ತಿರುವುದರಿಂದ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮಕ್ಕೆ ಮತ್ತೆ ಮುಳಗಡೆ ಭೀತಿ ಎದುರಾಗಿದ್ದು, ತಕ್ಷಣವೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ತಗ್ಗು ಪ್ರದೇಶದ 180ಕ್ಕೂ ಹೆಚ್ಚು ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಚಿಕನಾಗಾಂವ ಒತ್ತಾಯಿಸಿದರು.
ಗ್ರಾಮದ ಎಲ್ಲ ಸದಸ್ಯರೊಂದಿಗೆ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಣ್ಣೆತೊರೆ ಹಿನ್ನೀರಿನಿಂದಾಗಿ 12 ವರ್ಷಗಳ ಹಿಂದೆ ಗ್ರಾಮವನ್ನು ಮುಳುಗಡೆ ಪ್ರದೇಶ ಎಂದು ಘೋಷಿಸಲಾಗಿದೆ. ಗ್ರಾಮಸ್ಥರ ಪುನರ್ವಸತಿಗೆಂದು ಬೇರೆಡೆ ಸ್ಥಳ ಗುರುತಿಸಿ 512 ನಿವೇಶನಗಳನ್ನು ಗುರುತಿಸಲಾಗಿದೆ. ಆದರೆ, ಇದುವರೆಗೆ ಬಹುತೇಕರಿಗೆ ನಿವೇಶನದ ಹಕ್ಕು ಪತ್ರಗಳನ್ನೇ ವಿತರಿಸಿಲ್ಲ ಎಂದು ಆರೋಪಿಸಿದರು. ನಿರಂತರ ಹೋರಾಟದ ನಂತರ ಕಳೆದ ಐದು ತಿಂಗಳ ಹಿಂದೆ ಸುಮಾರು 183 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ.
ಈಗ ಸತತ ಮಳೆಯಿಂದ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಆದರೆ, ಖಾಲಿ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಗ್ರಾಮಸ್ಥರು ಅಶಕ್ತರಾಗಿದ್ದಾರೆ. ಹೀಗಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಆಶ್ರಯ ಕಲ್ಪಿ ಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕೆಂದು ಆಗ್ರಹಿಸಿದರು. ಪುನರ್ವಸತಿಗೆ ಗುರುತಿಸಿರುವ ಸ್ಥಳದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲಿಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ. ಕುಡಿಯುವ ನೀರು, ಒಳಚರಂಡಿಯಂತೂ ಇಲ್ಲವೇ ಇಲ್ಲ.
ಆದ್ದರಿಂದ ಈ ಸ್ಥಳವನ್ನು ಜಿಲ್ಲಾಡಳಿತ ಅಭಿವೃದ್ದಿ ಪಡಿಸಿ, ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದರು. ಮುಳುಗಡೆ ಪ್ರದೇಶ ಎಂದು ಘೋಷಿಸಿದ ನಂತರ ಐದು ಪ್ರವಾಹಗಳನ್ನು ಗ್ರಾಮ ಕಂಡಿದೆ. ಪ್ರವಾಹ ಭೀತಿ ಎದುರಾದಾಗ ಮಾತ್ರ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಸುಮ್ಮನೆ ಆಗುತ್ತಾರೆ.
ಸದ್ಯದ ಪರಿಸ್ಥಿತಿಯಲ್ಲೂ ಇದನ್ನೇ ಮಾಡಲಾಗುತ್ತಿದೆ. ಪುನರ್ವಸತಿ ಕೇಂದ್ರಕ್ಕೆ ತರಳಿ, ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಡಂಗೂರ ಸಾರಲಾಗುತ್ತಿದೆ. ಆದರೆ, ಮೂಲಸೌಕರ್ಯಗಳೇ ಇರದ ಪುನರ್ವಸತಿ ಕೇಂದ್ರದ ಖಾಲಿ ಸ್ಥಳಕ್ಕೆ ಗ್ರಾಮಸ್ಥರು ಹೋಗುವುದಾದರೂ ಹೇಗೆ? ಕನಿಷ್ಟ ಹಕ್ಕು ಪತ್ರ ದೊರೆತಿರುವ ನಿವಾಸಿಗಳಿಗಾದರೂ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
ಈ ನಿಟ್ಟಿನಲ್ಲಿ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಭೇಟಿಯಾಗಿ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಮಸ್ತಾನ ಡೊಂಗರಗಾಂವ್, ಸಿದ್ಧಪ್ಪ ಮರಪಳ್ಳಿ, ಸೂರ್ಯಕಾಂತ ವಡೆಯರ್, ಮುಖಂಡರಾದ ಮಲ್ಕಣ್ಣ ಪೂಜಾರಿ, ಅಮೃತ ಸಾಗರ ಇದ್ದರು.