ಅಫಜಲಪುರ: ತಾಲೂಕಿನಾದ್ಯಂತ ತೊಗರಿ ಬೆಳೆದ ರೈತರು ರಾಶಿ ಮಾಡಿ ಖಾಸಗಿ ಮಾರುಕಟ್ಟೆಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಸರ್ಕಾರಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಹಾಂತೇಶ ಜಮಾದಾರ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಶೀಘ್ರ ತಾಲೂಕಿನಾದ್ಯಂತ ಸರ್ಕಾರಿ ತೊಗರಿ ಖರೀದಿಕೇಂದ್ರಗಳನ್ನು ಆರಂಭಿಸಿ ರೈತರಿಗೆ ಅನುಕೂಲ
ಮಾಡಿಕೊಡಬೇಕು. ಅಲ್ಲದೇ ಪ್ರತಿ ಕ್ವಿಂಟಲ್‌ಗೆ 8,500 ರೂಪಾಯಿ ಬೆಂಬಲ ಬೆಲೆ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಹಾಗೂ ಇನ್ನಿತರ ಬ್ಯಾಂಕ್‌ಗಳ ಸಾಲಮನ್ನಾ ಮಾಡಬೇಕು. ಹಣ್ಣು ತರಕಾರಿ ಸ್ಥಳಾಂತರಿಸುವ ಜೊತೆಗೆ ದಲ್ಲಾಳಿಗಳು ರೈತರಿಗೆ ಮಾಡುವ ಮೋಸವನ್ನು ತಡೆಗಟ್ಟಬೇಕು.ಕೆಇಬಿ ಅವರು ರೈತರಿಗೆ ಟಿಸಿ ಹೆಸರಿನಲ್ಲಿ ಹಣ ಕೀಳುತ್ತಿದ್ದಾರೆ. ಇದನ್ನು ತಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಮಾಜ ಸೇವಕ ಜೆ.ಎಂ ಕೊರಬು ಮಾತನಾಡಿ, ಸದ್ಯ ಕೇಂದ್ರ ಮತ್ತು ರಾಜ್ಯದಲ್ಲಿಒಂದೇ ಪಕ್ಷ ಸರ್ಕಾರ ಇರುವುದರಿಂದ ಕೂಡಲೇ ರೈತಪರ ಆಡಳಿತ ನಿಡಬೇಕು. ಅಲ್ಲದೇ ರೈತರ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಅಧಿಕಾರಿ ಸುಮಂಗಲಾ ಹೂಗಾರ ಮಾತನಾಡಿ, ತೊಗರಿ ಖರೀದಿಗೂ ಮುನ್ನ ರೈತರ ನೋಂದಣಿ ಮಾಡಬೇಕು. ಈಗಾಗಲೇ ನೋಂದಣಿ ಕಾರ್ಯ ಶುರುವಾಗಿದ್ದು, ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರವೇ ಆರಂಭಿಸಿ ತೊಗರಿ ಖರೀದಿ ಮಾಡಲಾಗುವುದು ಎಂದರು. ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ಬಿರಾದಾರ, ಮಹಿಳಾಧ್ಯಕ್ಷೆ ಮಹಾಲಕ್ಷ್ಮೀ ಮಾತನಾಡಿದರು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.
ಶ್ರೀಶೈಲ ಗೊಳೆ, ಭೀರಣ್ಣ ಕನಕಟೇಲರ್, ಗುರುಲಿಂಗಪ್ಪ ಶಂಕರ ಅತನೂರೆ, ಕಲ್ಯಾಣಿ ಮೈನಾಳ, ರಾಹುಲ್ ಬಸರಿಗಿಡ, ಸಾಬಯ್ಯ ಗುತ್ತೇದಾರ, ರವಿ ಸುತಾರ, ಪೀರಪ್ಪ ತಳವಾರ, ವಿವೇಕಾನಂದ ಜಗದಿ, ಮಹಾದೇವ ನಾಗಣಸುರ, ಶಿವರಾಜ ಗೊಳೆ ಇದ್ದರು.