ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹಾಗೂ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದರು ಮಲೆನಾಡು ಭಾಗದಲ್ಲಿ ತಲೆದೋರಿರುವ ನೆಟ್ವರ್ಕ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದ್ದು, ಖಾಸಗಿ ಕಂಪನಿಗಳ ಜತೆಗೂಡಿ ಹೆಚ್ಚಿನ ಟವರ್‌ಗಳನ್ನು ಮಲೆನಾಡು ಭಾಗದಲ್ಲಿನ ನಿರ್ಮಾಣ ಮಾಡಬೇಕು. ಮಲೆನಾಡು ಭಾಗದಲ್ಲಿ ಹೆಚ್ಚಿನ ಭಾಗದಲ್ಲಿ ಬಿಎಸ್‌ಎನ್‌ಎಲ್ ಇದ್ದು ಖಾಸಗಿ ಕಂಪನಿಗಳು ಜತೆಗೂಡಬೇಕು. ಇದರಿಂದ ಬೆಂಗಳೂರಿನಿಂದ ರಜೆ ಸಂದರ್ಭದಲ್ಲಿ ಬರುವ ಯುವಕರಿಗೆ ಸಹಾಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಖಾಸಗಿ ಟೆಲಿಕಾಂ ಕಂಪನಿಗಳಿಗೆ, ಮಲೆನಾಡು ಭಾಗದಲ್ಲಿ ಯಾವುದೇ ರೀತಿಯಲ್ಲಿ ನೆಟ್ವರ್ಕ್ ಸಮಸ್ಯೆ ತಲೆದೋರುದಂತೆ ಟವರ್ ಅಳವಡಿಸಬೇಕು ಹಾಗೂ ಇದಕ್ಕೆ ಬೇಕಾದ ನೆರವನ್ನು ನೀಡಲು ಸಿದ್ಧ ಎಂದು ಕಂಪನಿಗಳಿಗೆ ಭರವಸೆ ನೀಡಲಾಯಿತು.
ಇನ್ನು ತುಮಕೂರು, ಶಿವಮೊಗ್ಗ ಹೆದ್ದಾರಿ ಯೋಜನೆಗೆ ತೊಡಕಾಗಿರೋ ತುಮಕೂರು ಪಟ್ಟಣದ ಭೂ ಸ್ವಾಧೀನ ಪ್ರಕ್ರಿಯೆಗೆ ಇದ್ದ ಸಮಸ್ಯೆಗಳನ್ನು ಸಭೆಯಲ್ಲಿ ಬಗೆಹರಿಸಲಾಯಿತು. ಹೈವೆಯಲ್ಲಿ ಹಾದು ಹೋಗುವ ಜಾಗದಲ್ಲಿರೋ ಕರೆಗಳನ್ನು ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಸಹ ತೀರ್ಮಾನಿಸಲಾಯಿತು. ಹೈವೇ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಸಿಗಂಧೂರು ಸೇತುವೆ ಒಟ್ಟು 2.4 ಕಿಮೀ ಉದ್ದವಿದ್ದು, ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಆದಷ್ಟು ಬೇಗ ಕೆಲಸ ಆರಂಭ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಯಿತು. ಇನ್ನು ಶಿವಮೊಗ್ಗ ಸುತ್ತ ಉದ್ದೇಶಿಸಲಾಗಿರೋ 2 ಲೈನ್ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ಇದ್ದ ರೈಲ್ವೆ ಭೂಸ್ವಾದೀನಕ್ಕೆ ಇದ್ದ ಸಮಸ್ಯೆ ಬಗೆಹರಿಸಿ, ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಲಾಯಿತು.