ಶಿರಸಿ: ಅಕ್ಷರ ದಾಸೋಹ ನೌಕರರಿಗೆ ಶಾಸನಬದ್ಧ ಕನಿಷ್ಠ ಕೂಲಿ, ನಿವೃತ್ತಿ ವೇತನದ ಜೊತೆಗೆ ಡಿ ಗ್ರುಫ್ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಪ್ರಮುಖರು ಇಲ್ಲಿಯ ಸಹಾಯಕ ಆಯುಕ್ತರ ಕಚೇರಿ ಎದುರು ಜಮಾಯಿಸಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಉಪವಿಭಾಗಾಧಿಕಾರಿ ಡಾ| ಈಶ್ವರ ಉಳ್ಳಾಗಡ್ಡಿಗೆ ಸಲ್ಲಿಸಿದ ಮನವಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಡುಗೆಯವರಾಗಿ ದುಡಿಯುತ್ತಿದ್ದಾರೆ. ಇವರಿಗೆ ಯಾವುದೇ ಜೀವನ ಭದ್ರತೆ, ನೌಕರ ನಿವೃತ್ತಿ ಇಲ್ಲ. ಮಾಸಿಕವಾಗಿ ಕೇವಲ 2,600ರೂ. ಪಡೆಯುತ್ತಿರುವ ಅಡುಗೆಯವರಿಗೆ ಕನಿಷ್ಠ 10ಸಾವಿರ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿ ಸಂಖ್ಯೆಯನ್ನಾಧರಿಸಿ ಅನೇಕ ವರ್ಷಗಳಿಂದ ಅಡುಗೆಯವರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸರ್ಕಾರ ಕೈ ಬಿಡಬಾರದು. ಬಿಸಿಯೂಟ ತಯಾರಕರು ಯಾವುದೇ ರೀತಿ ಮರಣ ಹೊಂದಿದಲ್ಲಿ ಅವರಿಗೆ 2ಲಕ್ಷ ರೂ. ಪರಿಹಾರ ಹಾಗೂ ಅಂತ್ಯಕ್ರಿಯೆಗೆ 30ಸಾವಿರ ರೂ. ಅನುದಾನ ಮೀಸಲಿಡಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಬಿಸಿಯೂಟ ತಯಾರಕರಿಗೆ 5ಲಕ್ಷ ರೂ. ಯೋಜನೆಯನ್ನು ಶಿಕ್ಷಣ ಇಲಾಖೆ ಅನುಷ್ಠಾನಗೊಳಸಿಬೇಕು. ಬಿಸಿಯೂಟ ತಯಾರಕರ ಕೈಪಿಡಿಯಲ್ಲಿರುವ ವಾರ್ಷಿಕವಾಗಿ ಹತ್ತು ದಿನದ ರಜೆ 20ದಿನಕ್ಕೆ ಏರಿಸಬೇಕು. ಸಿ.ಜಿ ಹಣದ ಹೆಚ್ಚಳದೊಂದಿಗೆ ದಿನಕ್ಕೊಂದು ತರಕಾರಿ ಅಡುಗೆ ಮಾಡುವುದನ್ನು ವಾಪಸ್ ಪಡೆಯಬೇಕು. ತಮಿಳುನಾಡು ಮಾದರಿಯಲ್ಲಿ ಬಿಸಿಯೂಟ ತಯಾರಕರಿಗೆ ಸರ್ಕಾರಿ ಸೌಲತ್ತುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.
ಪ್ರಮುಖರಾದ ಸರಸ್ವತಿ ಭಟ್ಟ, ಮೀನಾಕ್ಷಿ ಹಲಗೆರಿ, ಭುವನೇಶ್ವರಿ ನಾಯ್ಕ, ಸುಜಾತ ಭಟ್ಟ, ಕುಸುಮಾಕ್ಷಿ, ಪಾರ್ವತಿ ಭಟ್ಟ ಇತರರು ಇದ್ದರು.