Advertisement

ಕಾಯಂ ತಹಶೀಲ್ದಾರ್‌ ನೇಮಕಕ್ಕೆ ಒತ್ತಾಯ

04:35 PM Nov 18, 2019 | Suhan S |

ಮದ್ದೂರು: ತಾಲೂಕು ಕಚೇರಿಯಲ್ಲಿ ಸಮರ್ಪಕವಾದ ಕೆಲಸ ಕಾರ್ಯಗಳಾಗದೆ ಸಾರ್ವಜನಿಕರು ಪ್ರತಿನಿತ್ಯ ಅಲೆದಾಡುವ ಪ್ರವೃತ್ತಿ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

Advertisement

ಆಡಳಿತ ಶಕ್ತಿ ಕೇಂದ್ರವಾಗಬೇಕಾಗಿದ್ದ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಸಾರ್ವಜನಿಕ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದೆ ದೂರದ ಗ್ರಾಮ ಗಳಿಂದ ಆಗಮಿಸುವ ಸಾರ್ವಜನಿಕರು, ರೈತರು, ಮಹಿಳೆಯರು ಪರದಾಡುವ ಸ್ಥಿತಿ ಬಂದೊದಗಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಕಾರಣ ಇಷ್ಟೆಲ್ಲಾ ಅದ್ವಾನಗಳಿಗೆ ಕಾರಣವಾಗಿದ್ದು ಜತೆಗೆ ಕಾಯಂ ತಹಶೀಲ್ದಾರ್‌ ಇಲ್ಲದ ಕಾರಣ ಕಚೇರಿಯಲ್ಲಿ ಮತ್ತಷ್ಟು ಕಳೆಗುಂದಿದೆ.

ಜಾತಿ, ಆದಾಯ ಪ್ರಮಾಣ ಪತ್ರ, ಖಾತೆ ಬದಲಾವಣೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ಸೇರಿದಂತೆ ಇನ್ನಿತರೆ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಾವಿರಾರು ಅರ್ಜಿಗಳನ್ನು ಅರ್ಹ ಫ‌ಲಾನುಭವಿಗಳು ತಾಲೂಕು ಕಚೇರಿಗೆ ಸಲ್ಲಿಸಿದ್ದರೂ ತಹಶೀಲ್ದಾರ್‌ ಇಲ್ಲದ ಕಾರಣ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ. ಖಾತೆ ಬದಲಾವಣೆ, ಪೋಡಿ ಪ್ರಕರಣ, ಆರ್‌ಟಿಸಿ ಒಗ್ಗೂಡಿವಿಕೆ, ಹದ್ದುಬಸ್ತು ನಿಗಧಿಪಡಿಸುವುದು, ಸ್ಕೆಚ್‌ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಕೆಲ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಹೊರ ಹೋಗುವ ಅಧಿಕಾರಿಗಳೇ ಹೆಚ್ಚಾಗಿ ಕಂಡು ಬರುತ್ತಿರುವುದು ವಿಪರ್ಯಾಸವಾಗಿದೆ.

ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಕಾಯಂ ತಹಶೀಲ್ದಾರ್‌ ಅವರನ್ನು ನೇಮಿಸುವಂತೆ ಹಲವಾರು ಬಾರಿ ಪ್ರತಿಭಟನೆಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ವರ್ಷಕ್ಕೆ 9ಕ್ಕೂ ಹೆಚ್ಚು ತಹಶೀಲ್ದಾರ್‌ಗಳು ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿದ್ದರೂ ಕೇವಲ ಪ್ರಭಾರ ತಹಶೀಲ್ದಾರ್‌ಗಳೇ ಕರ್ತವ್ಯ ನಿರ್ವ ಹಿಸುತ್ತಿದ್ದು, ಮರಳು ದಂಧೆ, ನ್ಯಾಯಾಲಯದ ಪ್ರಕರಣ ಹಾಗೂ ಇನ್ನಿತರೆ ಸಮಸ್ಯೆಗಳಿಂದಾಗಿ ಮದ್ದೂರಿಗೆ ಬರುವ ತಹಶೀಲ್ದಾರ್‌ ಅವರನ್ನು ಕಾಡುತ್ತಿದ್ದು ಈಗಾಗಿಯೇ ಒತ್ತಡವಿರುವ ಜತೆಗೆ ರಾಜಕಾರಣಿಗಳ ಹಸ್ತಕ್ಷೇಪವು ತಹಶೀಲ್ದಾರ್‌ ಮೇಲಿನ ಒತ್ತಡ ಹೆಚ್ಚಾಗಿಸಿದೆ. ಆದ್ದರಿಂದ ಸರ್ಕಾರ ಕಾಯಂ ತಹಶೀಲ್ದಾರ್‌ ಅವರನ್ನು ನೇಮಕ ಮಾಡುವ ರೈತರ ಹಾಗೂ ಸಾರ್ವಜನಿಕರ ಕೆಲಸಕ್ಕೆ ಅನುವು ಮಾಡಿಕೊಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next