ಚಿಕ್ಕೋಡಿ: ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ವಿಜಯನಗರ ಜಿಲ್ಲೆ ಘೋಷಣೆ ವೇಳೆಯಲ್ಲಿ ಚಿಕ್ಕೋಡಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೇ ಮುಂದೇ ನಡೆಯುವ ಅನಾಹುತ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಹೇಳಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಹೋರಾಟಗಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಕಳೆದ 20 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಆದರೂ ಸಹ ರಾಜ್ಯ ಸರ್ಕಾರದಿಂದ ಉತ್ತರ ಸಿಗುತ್ತಿಲ್ಲ. ಒಂದು ವೇಳೆ ವಿಜಯನಗರ ಜಿಲ್ಲೆಯ ಜೊತೆಗೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡದೇ ಹೋದರೇ ಜಿಲ್ಲೆಗಾಗಿ ಸಾವುನೋವು ಉಂಟಾಗುವುದು ಶತಸಿದ್ಧ ಎಂದರು.
ಕಳೆದ ವರ್ಷ ಜಿಲ್ಲೆಗಾಗಿ 60 ದಿನ ನಿರಂತರ ಧರಣಿ ಸತ್ಯಾಗ್ರಹ ಮಾಡಿ ಸರ್ಕಾರದ ಗಮನ ಸೆಳೆದಾಗ ಬಿಜೆಪಿಯ ಶಶಿಕಲಾ ಜೊಲ್ಲೆ, ಪಿ.ರಾಜೀವ್, ಮಹಾಂತೇಶ ಕವಟಗಿಮಠ, ದುರ್ಯೋಧನ ಐಹೊಳೆ ಎಲ್ಲರೂ ಹೋರಾಟದಲ್ಲಿ ಪಾಲ್ಗೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೇ ಶೀಘ್ರವಾಗಿ ಜಿಲ್ಲೆ ಮಾಡುವುದಾಗಿ ಮಾತುಕೊಟ್ಟಿದ್ದರು.
ಈಗ ಬಿಜೆಪಿ ಸರ್ಕಾರ ರಚನೆಯಾಗಿದೆ. ಬಿಜೆಪಿ ಶಾಸಕರೇ ಎಲ್ಲಿದ್ದಿರ್ರೀ ಎಚ್ಚೆತ್ತುಕೊಂಡು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಜಿಲ್ಲೆ ಘೋಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆ ವೇಳೆಯಲ್ಲಿ ಪ್ರಧಾನಿ ಮೋದಿ ಚಿಕ್ಕೋಡಿಗೆ ಆಗಮಿಸಿದಾಗ ಸಾರ್ವಜನಿಕ ಸಮಾವೇಶದಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುತ್ತೇನೆಂದು ಪ್ರಧಾನಿ ಮೋದಿ ಮುಂದೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭರವಸೆ ನೀಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಆಸಕ್ತಿ ವಹಿಸಬೇಕು. ಚಿಕ್ಕೋಡಿ ಭಾಗದ ಇಬ್ಬರು ಸಚಿವರು ಇರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹಾಕಿ ಜಿಲ್ಲೆಯನ್ನಾಗಿ ಘೋಷನೆ ಮಾಡಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲೆ ವಿಜಯನಗರ ಜಿಲ್ಲೆಯ ಜೊತೆಗೆ ಚಿಕ್ಕೋಡಿ ಜಿಲ್ಲೆಯಾಗದೇ ಹೋದರೇ ದೆಹಲಿ ಜಂತರಮಂತರದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರು, ಸಂಸದರ ಜೊತೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಬೇಕು ಎಂದರು.ಈ ವೇಳೆ ಸೈನಿಕ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಬಾಳಾಸಾಹೇಬ ಸಂಗ್ರೊಳ್ಳೆ, ಹಿರಿಯ
ಸಾಹಿತಿ ಎಸ್.ವೈ. ಹಂಜಿ, ಸುರೇಶ ಬ್ಯಾಕೂಡೆ, ತುಕಾರಾಮ ಕೋಳಿ, ಸಂಜು ಬಡಿಗೇರ, ರಮೇಶ ಬಸ್ತವಾಡ ಇತರರು ಇದ್ದರು.