ಬಂಕಾಪುರ: ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳಿಗಾಗಿ ಪಟ್ಟಣದ ಅಲ್ಲಾವುದ್ದೀನ್ ಶಾ ಖಾದ್ರಿದರ್ಗಾ ಪಕ್ಕದ ಖಾಲಿ ಜಾಗೆಯಲ್ಲಿ ತಾತ್ಕಾಲಿಕ ಆರಂಭಗೊಂಡಿರುವ ಡಾಂಬರ್ ಮಿಶ್ರಣ ಘಟಕದಿಂದ ಹೊರಬರುತ್ತಿರುವ ಭಾರಿ ಪ್ರಮಾಣದ ವಿಷಯುಕ್ತ ಹೊಗೆ ಮತ್ತು ಧೂಳಿನಿಂದ ರೋಸಿ ಹೋದ ಸಾರ್ವಜನಿಕರು ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿಷಕಾರಿತೈಲ ಮಿಶ್ರಿತ ಡಾಂಬರ್ ಮಿಶ್ರಣಾ ಘಟಕದ ಹೊಗೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಘಟಕ ಸ್ಥಳಾಂತರಕ್ಕೆ ಒತ್ತಾಯಿಸಿ ಗುತ್ತಿಗೆದಾರ ವಿರುದ್ಧ ಸಾರ್ವಜನಿಕರು ಪ್ರತಿಭಟಿಸಿದರು. ಇಲ್ಲಿ ತಯಾರಿಸುತ್ತಿರುವ ಡಾಂಬರ್ ಮಿಶ್ರಣದಲ್ಲಿ ವಿಷಕಾರಿ ತೈಲ ಮಿಶ್ರಣ ಹಾಕಲಾಗುತ್ತಿದ್ದು, ಈ ತೈಲದ ವಾಸನೆ ಗಾಳಿಯೊಂದಿಗೆ ಬೆರೆತು ಜನರ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ. ಇದರ ದುರ್ವಾಸನೆಯಿಂದ ಜನರು ಮನೆಯಲ್ಲಿ ಊಟ ಸಹ ಮಾಡದಂತಾಗಿದೆ. ನೀರಿನತೊಟ್ಟಿ, ಬಟ್ಟೆ, ಮನೆಗಳ ಮೇಲ್ಛಾವಣಿ, ಕೊಠಡಿಗಳು ಧೂಳಿನಿಂದ ತುಂಬಿಕೊಂಡಿವೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಕಲ್ಯಾಣಶೆಟ್ಟಿ ಹಾಗೂ ಎಂಜನಿಯರ್ ಚವ್ಹಾಣ ಅವರನ್ನು ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡು, ಈ ಹಿಂದೆಯೆ ನಿಮಗೆ ಮೌಕಿಕ ಹಾಗೂ ಲಿಖೀತವಾಗಿ ಈ ಕುರಿತು ಮನವಿ ಮಾಡಿಕೊಂಡರೂ ಈ ಘಟಕ ಸ್ಥಳಾಂತರಿಸಿಲ್ಲ. ಈ ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ಹಾಗೂ ಸಾರ್ವಜನಿಕರ ಮಧ್ಯ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮಧ್ಯ ಪ್ರವೇಶಿಸಿದ ಪಿಎಸ್‌ಐ ಸಂತೋಷ ಪಾಟೀಲ ಅವರು ಗುತ್ತಿಗೆದಾರ, ಪುರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಠಾಣೆಗೆ ಕರೆಯಿಸಿ ಚರ್ಚಿಸಿದರು.
ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಡಾಂಬರ್ ಮಿಶ್ರಣ ಘಟಕವನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಗುತ್ತಿಗೆದಾರರು ಸಮ್ಮತಿ ಸೂಚಿಸಿದಾಗ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.
ಪುರಸಭೆ ಸದಸ್ಯ ಎನ್.ವಿ.ಪದ್ಮ, ಸುಭಾಸಗೌಡ ಪಾಟೀಲ, ರವಿ ಕಂಚಾರಬಾಟ್, ಅಲ್ಲಾವುದ್ದೀನ್ ಮನಿಯಾರ್, ಪ್ರಮೋದ ಚಲವಾದಿ, ಶಾರದಾ ಡಂಬಳ, ಎಸ್.ಎಂ. ಹಿರೇಮಠ, ಶಾಂತವೀರಯ್ಯ ಗಚ್ಚಿನಮಠ, ಹೊನ್ನಪ್ಪ ಹೂಗಾರ ಸೇರಿದಂತೆ ಮತ್ತಿತರರು ಇದ್ದರು.