ರಾಯಚೂರು: ನಗರದ ಕುಬೇರಾ ಹೋಟೆಲ್ ಹಿಂಭಾಗದ ರಾಜಕಾಲುವೆ (ಕಂದಕ)ದಿಂದ ಬಸವೇಶ್ವರ ವೃತ್ತದವರೆಗೆ ಸಾಕಷ್ಟು ಒತ್ತುವರಿ ಮಾಡಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಪಾವಗಡ ಶ್ರೀರಾಮಬಣ) ಸದಸ್ಯರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ನಗರದಲ್ಲಿ ಸಾಕಷ್ಟು ಕಡೆ ಸರ್ಕಾರಿ ಸ್ಥಳ ಒತ್ತುವರಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ರಾಜಕಾಲುವೆಗಳನ್ನೂ ಬಿಟ್ಟಿಲ್ಲ. ನಗರದ ಕುಬೇರಾ ಹೋಟೆಲ್ ಹಿಂಭಾಗದಿಂದ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಬರಲಾಗಿದೆ. ಅನೇಕ ವರ್ಷಗಳಿಂದ ಪುರಾತನ ಕಂದಕದ ಸ್ಥಳ ಸ್ವಂತಕ್ಕೆ ಬಳಸಿಕೊಂಡಿದ್ದರೂ ಯಾರು ತೆರವು ಮಾಡಲು ಮುಂದಾಗಿಲ್ಲ ಎಂದು ದೂರಿದರು.
ಕೆಲ ರಾಜಕೀಯ ಪ್ರಭಾವಿಗಳು, ಉದ್ಯಮಿಗಳ ಕುಮ್ಮಕ್ಕಿಗೆ ಐತಿಹಾಸಿಕ ರಾಯಚೂರು ಕೋಟೆ ಈ ರೀತಿ ಒತ್ತುವರಿಗೆ ಬಲಿಯಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಕಟ್ಟಡಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಐತಿಹಾಸಿಕ ಸ್ಥಳದಿಂದ 100 ಅಡಿ ಯಾವುದೇ ಕಾಮಗಾರಿ ನಡೆಸಬಾರದು ಎಂದಿದ್ದರೂ ಇಲ್ಲಿ ಮಾತ್ರ ಯಾವ ನಿಯಮ ಪಾಲಿಸಿಲ್ಲ. ಅನಧಿಕೃತ ಜಾಗ ಕಬಳಿಕೆ ನಡೆಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಹಾಗೂ ಪುರಾತತ್ವ ಇಲಾಖೆ ಮೌನಕ್ಕೆ ಶರಣಾಗಿದೆ ಎಂದು ದೂರಿದರು.
ಕೂಡಲೇ ಅಕ್ರಮ ಕಟ್ಟಡ ತೆರವುಗೊಳಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯಿಂದ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಹೇಮರಾಜ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಜಿ. ನರಸಿಂಹಲು ಮರ್ಚೆಟ್‌ಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉರುಕುಂದ ಸಿಯಾತಲಾಬ, ಪದಾಧಿಕಾರಿಗಳಾದ ಲಕ್ಷ್ಮಣ ಕಲ್ಲೂರು, ಬಿ. ಆಂಜನೇಯ, ಉರುಕುಂದಪ್ಪ ಜೆಗ್ಲಿ, ಗೋವಿಂದ, ಶಂಕರ, ಮಾರುತಿ, ಪೇತಪ್ಪ, ಸುರೇಶ ಇತರರಿದ್ದರು.