Advertisement

ಪುಸ್ತಕ ಖರೀದಿಸುವ ಪ್ರಕ್ರಿಯೆ ಮತ್ತೆ ಆರಂಭಿಸಲು ಒತ್ತಾಯ

12:09 PM Sep 02, 2017 | Team Udayavani |

ಬೆಂಗಳೂರು: ಪ್ರಕಾಶಕರಿಗೆ ಮತ್ತು ಲೇಖಕರಿಗೆ ಪ್ರೋತ್ಸಾಹ ನೀಡಲು ಸರ್ಕಾರವೇ ಪುಸ್ತಕ ಖರೀದಿಸುತ್ತಿದ್ದ ವ್ಯವಸ್ಥೆಯನ್ನು ಪುನರಾರಂಭಿಸಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಒತ್ತಾಯಿಸಿದರು. ಶುಕ್ರವಾರ ನಗರದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಲ್ಲವ ಪ್ರಕಾಶನ ಹೊರತಂದಿರುವ ಕನಕರಾಜ್‌ ಆರನಕಟ್ಟೆ ಅವರ “ಸಿಲೋನ್‌ ಸೈಕಲ್‌’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

Advertisement

ರಾಜ್ಯ ಸರ್ಕಾರ ಪುಸ್ತಕ ಖರೀದಿಸಿಸುವ ಸಂಸ್ಕೃತಿಯನ್ನು ಬಿಟ್ಟಿರುವುದರಿಂದ ಕನ್ನಡ ಪುಸ್ತಕೋದ್ಯಮಕ್ಕೆ ಸಾಕಷ್ಟು ಹಿನ್ನೆಡೆಯಾಗುತ್ತಿದೆ. ಹಿಂದಿನ ಸರ್ಕಾರಗಳು ಬಿಡುಗಡೆಯಾದ ಪುಸ್ತಕದ 300 ಪ್ರತಿಗಳನ್ನು ಖರೀದಿಸುವ ಮೂಲಕ ಪ್ರಕಾಶಕರು ಹಾಗೂ ಲೇಖಕರಿಗೆ ಪ್ರೋತ್ಸಾಹ ನೀಡುತಿತ್ತು.  ರಾಜಕಾರಣಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ  ಪುಸ್ತಕದ ಮೇಲೆ ಆಸಕ್ತಿ ಕಡಮೆ ಆಗಿರುವುದರಿಂದ ಈಗಿನ ಸರ್ಕಾರ ಪುಸ್ತಕ ಖರೀದಿಸುವುದನ್ನೇ ನಿಲ್ಲಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಿಧ ಸಂಸ್ಥೆಗಳಿಂದ ಸಂಗ್ರಹಿಸಿದ ಗ್ರಂಥಾಲಯ ಕರವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದನ್ನು ನೀಡಿದರೆ ಖರೀದಿ ಸಮಸ್ಯೆ ಅಲ್ಪಮಟ್ಟಿಗೆ ಶಮನವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುಸ್ತಕ ಪ್ರೀತಿಯಿದ್ದರೆ ಪುಸ್ತಕ ಖರೀದಿ ವ್ಯವಸ್ಥೆಗೆ ಮತ್ತೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಆಂಧ್ರಪ್ರದೇಶದಲ್ಲಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆ ಇರುವುದರಿಂದ ಪುಸ್ತಕ ಸಂಸ್ಕೃತಿ ಶೋಚನೀಯ ಸ್ಥಿತಿಯಲ್ಲಿದೆ. ಅಕಾಡೆಮಿಗಳು ನಿಷ್ಕ್ರಿಯವಾಗಿವೆ. ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪುಸ್ತಕ ಖರೀದಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಮಧ್ಯ ಪ್ರಾಚ್ಯದ ಕರಾಳತೆಯ ಅನಾವರಣ ಈ ಕಥಾ ಸಂಕಲನದಲ್ಲಿ ಆಗಿದೆ. ನಮಗೆ ಗೊತ್ತಿರುವ ಪ್ರಪಂಚವನ್ನು ಹೊಸ ಅರ್ಥದಲ್ಲಿ ತೋರಿಸುವ ಮತ್ತು ಗೊತ್ತಿಲ್ಲದ ಹೊಸ ಲೋಕದ ದರ್ಶನ ಮಾಡುವ ಪ್ರಯತ್ನ ಕಥೆಗಾರ ಮಾಡಿದ್ದಾರೆ ಎಂದರು. ವಿಮರ್ಶಕ ಡಾ. ರಾಜೇಂದ್ರ ಚೆನ್ನಿ, ಲೇಖಕ ಕನಕರಾಜ್‌ ಆರನಕಟ್ಟೆ, ಪ್ರಕಾಶಕ ಪಲ್ಲವ ವೆಂಕಟೇಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next