ಮದ್ದೂರು: ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಜತೆಗೆ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರುನಾಡ ಸೇನಾನಿ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಆಡಳಿತ ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪ ಪ್ರಾಥಮಿಕ ಆಸ್ಪತ್ರೆಯು ಹಲವಾರು ಅವ್ಯವಸ್ಥೆಗಳಿಂದ ಕೂಡಿದ್ದು ಕರ್ತವ್ಯ ನಿರತ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಜತೆಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ಬಂದೊದಗಿದ್ದು, ಕಳೆದ ಹಲವಾರು ವರ್ಷಗಳಿಂದಲೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸುತ್ತಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.
ಹಲವು ಗ್ರಾಮಗಳಿಂದ ಆಗಮಿಸುವ ರೋಗಿಗಳು ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ಪರಿತಪಿಸುವ ಸ್ಥಿತಿ ಬಂದೊದಗಿದೆ. ಕುಡಿವ ನೀರು, ಶೌಚಾ ಲಯ, ಸೂಕ್ತ ಚಿಕಿತ್ಸೆ ಇಲ್ಲದಿರುವುದು ಹಾಗೂ ಫಿಜಿಷಿಯನ್ ವೈದ್ಯರಿಲ್ಲದೆ ರೋಗಿಗಳು ಪ್ರತಿನಿತ್ಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ನಿರ್ಮಾಣ ಗೊಂಡಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲದೆ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಎಲ್ಲೆಡೆ ಅಶುಚಿತ್ವ ತಾಂಡವವಾಡುತ್ತಿದೆ. ಕರ್ತವ್ಯ ನಿರತ ವೈದ್ಯರು ವಾಸಸ್ಥಳದಲ್ಲಿ ಹಾಜರಿಲ್ಲದೆ ಪ್ರತಿನಿತ್ಯ ದೂರದ ಗ್ರಾಮಗಳಿಂದ ಬಂದು ಹೋಗು ತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಬೇಕು. ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸಂಘಟನೆ ರಾಜ್ಯ ಕಾರ್ಯದರ್ಶಿ ಜಭಿಉಲ್ಲಾ, ರಮೇಶ್, ಹೋಬಳಿ ಅಧ್ಯಕ್ಷ ಆದರ್ಶ್, ಪದಾಧಿಕಾರಿ ಫರಿಜ್, ಎಂ. ಪಿ. ಶೇಖರ್, ಮಂಜುಳಾ, ಪ್ರಿಯಾ ರಮೇಶ್ ಇತರರಿದ್ದರು.