ಹರಪನಹಳ್ಳಿ: ರಾಜ್ಯಾದ್ಯಂತ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಂದ ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ತಡೆಯಲು ಒತ್ತಾಯಿಸಿ ಎನ್‌ಎಸ್‌ಯುಐ ಪದಾಧಿಕಾರಿಗಳು ಸ್ಥಳೀಯ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ವಿವಿಧ ತೆರನಾದ ಅನೇಕ ವಿನಾಯಿತಿ ಪಡೆದಿದ್ದರೂ ಡೊನೇಷನ್ ವಿಚಾರದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಶಿಕ್ಷಣದ ಖಾಸಗೀಕರಣದ ಪರಿಣಾಮದಿಂದಾಗಿ ಈ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿಲ್ಲ. ಹೀಗಾಗಿ ಶಿಕ್ಷಣ ದಾಸೋಹ ಪರಿಕಲ್ಪನೆ ಬಡ ಮತ್ತು ಮಧ್ಯಮ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಂಚಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ವೈರಸ್ ಕಾರಣಕ್ಕೆ ಸದ್ಯಕ್ಕೆ ಶಾಲಾ-ಕಾಲೇಜುಗಳು ತಟಸ್ಥಗೊಂಡಿದ್ದರೂ ಕೂಡ ಶೈಕ್ಷಣಿಕ ವರ್ಷ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಶಿಕ್ಷಣ ಸಂಸ್ಥೆಗಳು ಫೋನು ಕರೆಗಳು, ಮೆಸೇಜ್‌ಗಳ ಮುಖಾಂತರ ಡೊನೇಷನ್ ಪೀಡನೆ ಆರಂಭಗೊಂಡಿದೆ. ಲಾಕೌಡೌನ್‌ನಿಂದ ಈಗಾಗಲೇ ಜನ ಆರ್ಥಿಕ ಹೊರೆಯಿಂದ ಬಳಲುತ್ತಿದ್ದು, ಕಾರ್ಮಿಕ ವರ್ಗ ಮತ್ತು ದಿನಗೂಲಿ ಕುಟುಂಬಗಳು ಬೀದಿಗೆ ಬಿದ್ದು ಕೇವಲ ದಾನಿಗಳ ಆಹಾರ ಸಾಮಾಗ್ರಿಗಳ ಸಹಕಾರದಿಂದ ಬದುಕು ಸಾಗಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ದುಬಾರಿ ಶುಲ್ಕ ನೀಡಿ ಶಾಲಾ-ಕಾಲೇಜುಗಳಲ್ಲಿ ಭರ್ತಿ ಮಾಡುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆಯದಂತೆ ಕಟ್ಟು ನಿಟ್ಟಾದ ಕ್ರಮ ಜರುಗಿಸಿ, ಸರ್ಕಾರ ನಿಗದಿ ಮಾಡಿದ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಲು ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಜೀಷಾನ್, ತಾಲೂಕು ಅಧ್ಯಕ್ಷ ಎಂ.ಡಿ. ಶ್ರೀಕಾಂತ, ಪ್ರಧಾನ ಕಾರ್ಯದರ್ಶಿ ಎಸ್.ಸಾದಿಕ್, ಕಾರ್ಯದರ್ಶಿ ಬಿ.ಮೋಹನ್‌ಕುಮಾರ, ಲಾಟಿ ಅಮೀರ್ ಸೊಹೇಲ್, ಉಪಾಧ್ಯಕ್ಷ ಡಂಕಿ ವಾಸೀಂ, ಸಹಕಾರ್ಯದರ್ಶಿ ದೊರೆ ಗುರುಬಸವರಾಜ, ಹಡಗಲಿ ಅಬುಸಾಲೇಹ ಇದ್ದರು.