Advertisement

ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಲು ಒತ್ತಾಯ

09:32 PM Jul 09, 2019 | Lakshmi GovindaRaj |

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶಿಕ್ಷಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವ ನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಳ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ಎನ್‌.ನೇತ್ರಾವತಿ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆದಿರಲಿಲ್ಲ. ಈಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್‌ ತಿಂಗಳಲ್ಲಿ ಮತ್ತೂಮ್ಮೆ ಕೇವಲ ಕೋರಿಕೆ ವರ್ಗಾವಣೆ ಮಾಡಬೇಕು.

ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ- ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರಿಯರಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

Advertisement

6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಶಿಕ್ಷಕರಿಗೆ 10, 15, 20, 25, 30 ವರ್ಷದ ಬಡ್ತಿಯನ್ನು ನೀಡಬೇಕು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯವರೆಗೂ ಬಡ್ತಿಯನ್ನು ನೀಡಬೇಕು.

ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಎಲ್ಲ ಸೇವಾ ಸೌಲಭ್ಯ ನೀಡಬೇಕು. ಸಿ.ಆರ್‌.ರೂಲ್‌ ಅಮೂಲಾಗ್ರ ಬದಲಾವಣೆಯಾಗಬೇಕು. ಪ್ರತಿ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷರನ್ನು ನೇಮಿಸಬೇಕು. ದೈಹಿಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಘದ ಅಧ್ಯಕ್ಷೆ ಎನ್‌.ನೇತ್ರಾವತಿ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮಸ್ವಾಮಿ, ಉಪಾಧ್ಯಕ್ಷ ದಿನೇಶ್‌, ಖಜಾಂಚಿ ಪಿ.ಸೋಮಪ್ಪ, ಸಹ ಕಾರ್ಯದರ್ಶಿಗಳಾದ ಎಂ.ಗಿರೀಶ್‌, ಎಂ.ಕಮಲಮ್ಮ, ಸಂಘಟನಾ ಕಾರ್ಯದರ್ಶಿ ಸುವರ್ಣಕುಮಾರಿ, ಮಹದೇವಸ್ವಾಮಿ, ಮಲ್ಲಶೆಟ್ಟಿ, ಮಹದೇವಯ್ಯ, ರಾಚಯ್ಯ,

ರಂಗಸ್ವಾಮಿ, ತಾಲೂಕು ಅಧ್ಯಕ್ಷರುಗಳಾದ ಪ್ರಕಾಶ್‌, ರಾಜು, ಮಹೇಶ್‌, ಜಾನ್‌ಬ್ರಿಟೋ, ಪುಕನಿ, ಕಾರ್ಯದರ್ಶಿಗಳಾದ ಭರತ್‌ಭೂಷಣ್‌, ರವಿಕುಮಾರ್‌, ಗಿರೀಶ್‌, ನಂದೀಶ್‌, ಶಿವಯ್ಯ, ಶಿಕ್ಷಕರಾದ ಮಾದಪ್ಪ, ಬಸವಣ್ಣ, ಶಿವಕುಮಾರ್‌, ಎಸ್‌.ನೇತ್ರಾವತಿ, ಮಹದೇವಪ್ಪ, ಪುಟ್ಟಮಹದೇವಪ್ಪ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next