ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರರ ದುಷ್ಕೃತ್ಯದಿಂದ ಮೃತಪಟ್ಟ ನಾಗರಿಕರಿಗೆ ಇಂಪ್ಯಾಕ್ಟ್ ಇಂಡಿಯಾ, ಭೀಮಾ ಫೆರ್ವಾಡ್-ಕೆ ಮತ್ತು ಕರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳವಾರ ಪುರಭವನದ ಮುಂದೆ ಮೇಣದ ಬತ್ತಿಯನ್ನು ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
“ವಿಶ್ವದ ಯಾವುದೇ ಮೂಲೆಯಲ್ಲಿ ಇಂತಹ ಕೃತ್ಯಗಳು ನಡೆಯಬಾರದು ಮನುಷ್ಯರನ್ನು ಕೊಂದು ಸಾಧನೆ ಮಾಡಿರುವಂತೆ ಉಗ್ರಸಂಘಟನೆಗಳು ಬಿಂಬಿಸಿಕೊಳ್ಳುತ್ತಿವೆ. ಈ ಬೆಳವಣಿಗೆಯನ್ನು ಕ್ರೈಸ್ತ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ. ಇದು ದುರಂತವಲ್ಲದೆ ಮತ್ತೇನು’ ಎಂದು ಕರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಕ್ರೈಸ್ತರು ಶಾಂತಿ ಪ್ರಿಯರು ಈಸ್ಟರ್ ದಿನಕೂಟದಲ್ಲಿ ದುರಂತ ಸಂಭವಿಸಿ, ನೂರಾರು ಜನ ಅಮಾಯಕರು ಮೃತಪಟ್ಟಿದ್ದಾರೆ. ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ಧರ್ಮದ ಜನರ ಮೇಲೆ ಇಂತಹ ದಾಳಿಗಳು ನಡೆಯಬಾರದು ಎಂದು ಹೇಳಿದರು.
ಇಂಪ್ಯಾಕ್ಟ್ ಇಂಡಿಯಾದ ಸಂಸ್ಥಾಪಕ ಡಾ. ಸಂಪತ್, ಕರ್ನಾಟಕದಲ್ಲಿನ ಚರ್ಚ್‌ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಧರ್ಮಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇಲ್ಲಿನ ರಾಜ್ಯದ ಪ್ರಮುಖ ಚರ್ಚ್‌ಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಸಾವಿರಾರು ಜನ ಪ್ರಾರ್ಥನೆ ಮಾಡಲು ಸೇರುತ್ತಾರೆ.
ಪ್ರಾರ್ಥನೆ ಮಾಡುವ ನೆಪದಲ್ಲಿ ಯಾರಾದರೂ ಬಂದು ಬಾಂಬ್ ದಾಳಿ ನಡೆಸಿದರೆ ಗೊತ್ತಾಗುವುದಿಲ್ಲ ಎಂದರು. ಈ ದಾಳಿ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ಇಲ್ಲಿನ ಚರ್ಚ್‌ಗಳಲ್ಲಿ ಮೆಟಲ್ ಡಿಟೆಕ್ಟರ್ ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.