ಕಲಬುರಗಿ: ತಾಲೂಕಿನ ಹಾಗರಗಿ ಗ್ರಾಪಂ ವ್ಯಾಪ್ತಿಯ ಆಜಾದಪೂರ ಗ್ರಾಮದಲ್ಲಿ ನಾಲ್ಕು ಕಡೆ ಪೈಪ್‌ಲೈನ್ ಒಡೆದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಕ್ಷಣವೇ ಪೈಪ್‌ಲೈನ್ ದುರಸ್ತಿ ಮಾಡಿಸಿ ಸಾರ್ವಜನಿಕರ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕೆಂದು ಗ್ರಾಪಂ ಸದಸ್ಯರಾದ ಸೂರ್ಯಕಾಂತ ಶಂಕರ, ಮೀನಾಕ್ಷಿ ಸೂರ್ಯಕಾಂತ ಮತ್ತು ಗ್ರಾಮಸ್ಥರು ಒತ್ತಾಯಿಸಿದರು.
ಒಡೆದ ಪೈಪ್‌ಲೈನ್‌ನಲ್ಲಿ ನಾಲೆಯ ಕಲುಷಿತ ನೀರು ಸೇರುತ್ತಿದೆ. ಪೈಪ್‌ಲೈನ್ ದುರಸ್ತಿ ಪಡಿಸುವಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ರೋಗ ಹರಡುವ ಭೀತಿ ಉಂಟಾಗಿದೆ. ಜತೆಗೆ ಕುಡಿಯುವ ನೀರಿನ ಅಭಾವ ಕೂಡ ಹೆಚ್ಚಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸದೆ ಸತಾಯಿಸಲಾಗುತ್ತಿದೆ. ಪಾವತಿಸುವಂತೆ ಅರ್ಜಿ ಸಲ್ಲಿಸಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಜತೆಗೆ ಕಳೆದ 2015-16 ಮತ್ತು 2018-19ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿ ಮಾಡಿಲ್ಲ. ಅಲ್ಲದೇ, ಬೋರ್‌ವೆಲ್ಗಳ ಬಿಲ್ ಸಹ ಪಾವತಿಸಿಲ್ಲ. ಈ ಬಗ್ಗೆ ಜಿಪಂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಪಿಡಿಒ ಚೆಕ್ ಬರೆದು ಕೊಟ್ಟರೂ ಅಧ್ಯಕ್ಷರು ಸಹಿ ಮಾಡುತ್ತಿಲ್ಲ ಎಂದು ಆರೋಪಿಸಿದರು. ಆದ್ದರಿಂದ ಗ್ರಾಪಂ ಅಧ್ಯಕ್ಷರು, ಪಿಡಿಒ ವಿರುದ್ಧ ಕ್ರಮಕೈಗೊಂಡು, ಸಾರ್ವಜನಿಕರ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕೆಂದು ಎಂದು ಸೂರ್ಯಕಾಂತ ಶಂಕರ, ಮೀನಾಕ್ಷಿ ಸೂರ್ಯಕಾಂತ, ಮುಖಂಡರಾದ ಬಸವರಾಜ ಗದ್ದಿ, ಮಲ್ಲಪ್ಪ ತಾವರಗೇರಾ, ವಿಜಯಕುಮಾರ ಪಾಟೀಲ, ದಿಲೀಪ್ ಪಟೇಲ್ ಮೊದಲಾದವರು ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಚಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.