Advertisement

ಶಬರಿಮಲೆ ಭಕ್ತರನ್ನು ಬಿಡುಗಡೆಗೊಳಿಸಲು ಒತ್ತಾಯ

11:50 AM Nov 21, 2018 | Team Udayavani |

ಬೆಂಗಳೂರು: ಶಬರಿಮಲೆಯಲ್ಲಿ ಭಕ್ತರನ್ನು ಬಂಧಿಸಿರುವುದು ಖಂಡನೀಯ. ತಕ್ಷಣ ಭಕ್ತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್‌ಪಡೆದು ಬಿಡುಗಡೆ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

Advertisement

ಮಂಗಳವಾರ ಶಬರಿಮಲೆ ಸಂರಕ್ಷಣಾ ಸಮಿತಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಕೇರಳ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಬರಿಮಲೆ ದೇವಸ್ಥಾನದಲ್ಲಿ ಭಕ್ತರಿಗಿಂತ ಪೊಲೀಸ್‌ ಸಿಬ್ಬಂದಿಯೇ ಹೆಚ್ಚಿದ್ದಾರೆ.

ಕೇರಳದ ಕಮ್ಯೂನಿಸ್ಟ್‌ ಸರ್ಕಾರ ಹಿಂದೂ ಸಂಪ್ರದಾಯಗಳನ್ನು ಬುಡಮೇಲು ಮಾಡುವ ಹುನ್ನಾರ ನಡೆಸುತ್ತಿದೆ. ಹಿಂದೂ ಸಂಪ್ರದಾಯಕ್ಕೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಕೇರಳ ಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು. ಕೇರಳ ಸರ್ಕಾರ ಅಲ್ಲಿರುವ ದೇವಾಲಯಗಳಿಗೆ ಮೂಲಸೌಕರ್ಯ ಒದಗಿಸದೆ ಭಕ್ತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ದೇವಾಲಯಗಳಿಂದ ಬಂದಂತಹ ಆದಾಯದಲ್ಲಿ ಚರ್ಚ್‌ ಮತ್ತು ಮಸೀದಿಗಳ ಅಭಿವೃದ್ಧಿ ಮಾಡುತ್ತಿದೆ ಎಂದು ದೂರಿದರು.

ಹಿಂದೂ ಸಂಪ್ರದಾಯ ಹಾಗೂ ಶಬರಿಮಲೆ ಪರಂಪರೆ ಬಗ್ಗೆ ಸುಪ್ರಿಂಕೋರ್ಟ್‌ಗೆ ಕೇರಳ ಸರ್ಕಾರ ಮನವರಿಕೆ ಮಾಡಲು ಪ್ರಯತ್ನಪಡಬೇಕಿತ್ತು. ಶಬರಿಮಲೆಯಲ್ಲಿ ನಡೆಯುತ್ತಿರುವ ಸತ್ಯಾಸಂಗತಿಗಳನ್ನು ಕೇರಳದ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿಳಿಸುತ್ತಿಲ್ಲ. ಈಗಾಗಲೇ ಶಬರಿಮಲೆಯ 5 ಸಾವಿರ ಭಕ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ಸಾವಿರ ಭಕ್ತರನ್ನು ಬಂಧಿಸಿರುವ ಪೊಲೀಸರು ಶಬರಿಮಲೆ ಸಂಪ್ರದಾಯದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾತನಾಡಿ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್‌ನ ಆದೇಶದ ಅನುಷ್ಠಾನಕ್ಕೆ ಕೇರಳ ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಇಡೀ ಕೇರಳದ ಜನತೆ ವಿರೋಧ ವ್ಯಕ್ತಪಡಿಸುತ್ತಿದೆ. ನಾವು ಎಲ್ಲ ಸಮುದಾಯಗಳ ಪರಂಪರೆಯನ್ನು ಗೌರವಿಸಬೇಕು.

Advertisement

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶ ಬೇಕೆಂದು ಬಯಸಿರುವ ಬುದ್ಧಿಜೀವಿಗಳಿಗೆ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಒದಗಿಸಲು ಹೋರಾಟ ನಡೆಸಬೇಕೆಂದು ಯೋಚನೆ ಬರಲಿಲ್ಲವೇ? ಎಂದು ಪ್ರಶ್ನಿಸಿದರು. ಪ್ರತಿಭಟನಕಾರರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರತಿಕೃತಿ ದಹಿಸಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿದ್ದರಾಮಯ್ಯ ಸರ್ಕಾರದ ಬಳಿಕ ಕುಮಾರಸ್ವಾಮಿ ಅವರು ಸಾಲ ಮನ್ನಾದ ಬೊಗಳೆ ಬಿಡುತ್ತಿದ್ದಾರೆ. ಕಬ್ಬು ಬೆಳೆಗಾರ ಬೇಡಿಕೆಯಂತೆ ಬೆಲೆ ನಿಗದಿಪಡಿ ಬಾಕಿ ಪಾವತಿ ಸೇರಿದಂತೆ ಸಾಲಮನ್ನಾ ಮಾಡಲು ಮುಂದಾಗಿಲ್ಲ. ರೈತರ ಪರವಾಗಿ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next