ಗದಗ: ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗದೇ ಬಾಕಿ ಇರುವ ಬೆಳೆ ವಿಮಾ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಕುರಿತು ರೈತ ಸಂಘದ ಪ್ರಮುಖರು ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಅವರಿಗೆ ಮನವಿ ಸಲ್ಲಿಸಿ, ಚಿಕ್ಕಮಣ್ಣೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರಿಗೆ 2016ರಿಂದ ಈ ವರೆಗೆ ಯಾವುದೇ ರೀತಿಯ ವಿಮಾ ಹಣ ಬಿಡುಗಡೆಯಾಗಿಲ್ಲ.
2016-17 ಹಿಂಗಾರು, 2017-18ನೇ ಸಾಲಿನ ಮುಂಗಾರಿನ ಕಡಲಿ, ಜೋಳ ಹಾಗೂ 2018-19ರ ಮುಂಗಾರು ಬೆಳೆಗಳಾದ ಹೆಸರು ಮತ್ತು ಮುಸುಕಿನ ಜೋಳ ಮತ್ತು ಶೇಂಗಾ ಬೆಳೆಗಳಿಗೆ ವಿಮೆ ಮಾಡಿಸಲಾಗಿತ್ತು. ಆದರೆ, 2016ರಿಂದ 2018ರ ವರೆಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬರಗಾಲ ಕಾಡಿದ್ದರಿಂದ ಬೆಳೆ ಸಂಪೂರ್ಣ ಹಾನಿಗೀಡಾಗಿದೆ.
ಆದರೆ, ಚಿಕ್ಕಮಣ್ಣೂರು ಗ್ರಾ.ಪಂ. ವ್ಯಾಪ್ತಿಯ ಅರಹುಣಸಿ, ಭಾಸಲಾಪುರ, ಚಿಕ್ಕಮಣ್ಣೂರ, ಹಿರೇಮಣ್ಣೂರ ಭಾಗದ ರೈತರಿಗೆ ಬೆಳೆ ವಿಮೆಯಿಂದ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಪರಿಶೀಲಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಶಾಂತಸ್ವಾಮಿ ಹಿರೇಮಠ, ಮುತ್ತಣ್ಣ ಚೌಡರೆಡ್ಡಿ, ಶರಣಪ್ಪ ಚಿಗರಿ, ಬಸನಗೌಡ ಸಿ. ಪಾಟೀಲ, ಯಲ್ಲಪ್ಪಗೌಡ ಶಿ. ಪಾಟೀಲ, ಉಮೇಶ ಮ.ತಡಹಾಳ, ಶಂಕ್ರಪ್ಪ ಶಿವಳ್ಳಿ, ರುದ್ರಪ್ಪ ವಿ. ರೋಣದ, ಗೋವಿಂದಪ್ಪ ಕಿರಟಗೇರಿ, ಗಂಗಾಧರಯ್ಯ ಹಿರೇಮಠ, ಬಾಳಪ್ಪ ಮೊರಬದ ಮತ್ತಿತರರು ಇದ್ದರು.