ಸಿಂದಗಿ: ಗ್ರಾಮಗಳಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ. ಕುಡಿಯುವ ನೀರಿನ ಸಮಸ್ಯೆಯಿದೆ, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಪ್ರತಿನಿಧಿಗಳು ಸಚಿವ ಎಂ.ಸಿ. ಮನಗೂಳಿ ಅವರಿಗೆ ಒತ್ತಾಯಿಸಿದ ಘಟನೆ ಪಟ್ಟಣದ ತಾಪಂ ಸಭಾಭವನದಲ್ಲಿ ಶನಿವಾರ ಗ್ರಾಪಂ ಅಧ್ಯಕ್ಷರು, ತಾಪಂ ಮತ್ತು ಜಿಪಂ ಸದಸ್ಯರಿಗೆ ಹಮ್ಮಿಕೊಂಡ ತುರ್ತು ಸಭೆಯಲ್ಲಿ ನಡೆದಿದೆ.
ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಮಾತನಾಡಿ, ಅಭಿವೃದ್ಧಿ ಸಭೆಗಳು ಕಾಟಾಚಾರಕ್ಕೆ ನಡೆಯಬಾರದು. ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಜನತೆಗೆ ಮುಖ್ಯವಾಗಿ ನೀರು, ಶಿಕ್ಷಣ, ವಿದ್ಯುತ್, ರಸ್ತೆ ಮತ್ತು ಬಸ್ ಮುಖ್ಯವಾಗಿಬೇಕು. ಅವರ ಈ ಬೇಡಿಕೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಈಡೇರಿಸಬೇಕು ಎಂದರು.
ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿ, ಜನತೆಗೆ ನೀರು ಎಷ್ಟು ಮುಖ್ಯನೋ ಅಷ್ಟೇ ಶಿಕ್ಷಣ ಬೇಕಾಗಿದೆ. ಆದರೆ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಸಿಂದಗಿ ಪಟ್ಟಣದ ಅನಧಿಕೃತ ವಸತಿ ಶಾಲೆಯಲ್ಲಿ ಒಂದು ಮಗು ಸಾವನ್ನಪ್ಪಿತು. ಈ ಸಾವಿಗೆ ಯಾರು ಹೊಣೆ ಹೊತ್ತುಕೊಳ್ಳಲಿಲ್ಲ. ಏಕೆಂದರೆ ಅದು ಬಡವರ ಮಗು. ಒಂದು ಮಗುವಿನ ಪ್ರಾಣ ಹೋದರು ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೋಚಿಂಗ್ ಹೆಸರಿನಲ್ಲಿ ಅನಧಿಕೃತ ವಸತಿ ಶಾಲೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಇತ್ತೀಚೆಗೆ ಕ್ಷೇತ್ರಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಟ್ಟಣದ ನಾಗೂರ ಬಡಾವಣೆಯಲ್ಲಿ ನಡೆಯುತ್ತಿರುವ ಆರ್.ಡಿ. ಕುಲಕರ್ಣಿ ಕೋಚಿಂಗ್ ಶಾಲೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಬೇರೆ ಶಾಲೆಯಲ್ಲಿ ಹೆಸರು ದಾಖಲಾತಿ ಹೊಂದಿದ 250ಕ್ಕೂ ಹೆಚ್ಚು ಮಕ್ಕಳು, ಕ್ಷೇತ್ರ ಶಿಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಜೋಶಿ ಕೋಚಿಂಗ್ ಶಾಲೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಬೇರೆ ಶಾಲೆಯಲ್ಲಿ ಹೆಸರು ದಾಖಲಾತಿ ಹೊಂದಿದ 25ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವುದು ವರದಿಯಾಗಿದೆ ತಿಳಿದು ಬಂದಿದೆ. ಈಗ ಮಕ್ಕಳು ಎಲ್ಲಿವೆ. ಎಲ್ಲ ಮಕ್ಕಳನ್ನು ಮೂಲ ಶಾಲೆಗೆ ಕಳುಹಿಸಲಾಗಿದೆಯೇ ಎಂಬುವುದಕ್ಕೆ ಉತ್ತರ ಇಲ್ಲ ಎಂದು ಆರೋಪಿಸಿದರು.
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಅನಧಿಕೃತ ಶಾಲೆಗಳು ಕಂಡು ಬಂದಲ್ಲಿ ಅಂಥ ಶಾಲೆಗೆ ಒಂದು ಲಕ್ಷ ರೂ. ದಂಡ ಹಾಕಬೇಕು. ಹಾಗೆ ಮುಂದುವರಿದರೆ ಪ್ರತಿ ದಿನಕ್ಕೆ 10 ಸಾವಿರ ರೂ. ದಂಡ ಹಾಕಬೇಕು. ಇಷ್ಟೇಲ್ಲ ಕಾನೂನು ಇದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರು ದಾಳಿ ಮಾಡಿ ಪಟ್ಟಿ ಮಾಡಿದ ಅನಧಿಕೃತ ಶಾಲೆಗಳ ಮೇಲೆ ದಂಡ ಕಟ್ಟಿದ ಉದಾಹರಣೆಗಳಿಲ್ಲ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘನೆ ಮಾಡಿರುವುದು ಕಂಡು ಬರುತ್ತದೆ. ಆದ್ದರಿಂದ ಈ ವಿಷಯನ್ನು ಪರಿಶೀಲನೆ ಮಾಡಿ ತಪ್ಪಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಅನಧಿಕೃತ ಶಾಲೆಗಳ ಬಗ್ಗೆ ಮತ್ತು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಮೇಲೆ ಬಂದ ಆರೋಪದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ತಾಪಂ ಇಒ ಭಾರತಿ ಚಲುವಯ್ಯ ಅವರಿಗೆ ಸೂಚನೆ ಮಾಡಿದರು.
ಜಿಪಂ ಸದಸ್ಯೆ ಭುವನೇಶ್ವರಿ ಬಗಲಿ ಮಾತನಾಡಿ, ಬಂದಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಅಧಿಕಾರಿಗಳು ಗ್ರಾಮಗಳಲ್ಲಿನ ಕುಡಿಯುವ ನೀರಿನ ಬಗ್ಗೆ ಮಾಹಿತಿನೀಡಿದರು. ಹೆಚ್ಚಿನ ಗಮನ ನೀಡುವುದಿಲ್ಲ. ಏನಾದರು ಕೇಳಿದರು ವರದಿ ಸಲ್ಲಿಸುತ್ತೇವೆ. ಮೇಲಾ ಧಿಕಾರಿಗಳಿಂದ ಅನುಮತಿ ಪಡೆಯುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಜಿಪಂ ಸದಸ್ಯ ಬಿ.ಆರ್. ಯಂಟಮನ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳನ್ನು ಗುರುತಿಸಿ ದುರಸ್ತಿ ಮಾಡಬೇಕು ಎಂದು ಹೇಳಿದರು.
ಜಾಲವಾದ ಗ್ರಾಪಂ ಸದಸ್ಯ ಎಸ್.ಎಸ್. ಚಿತ್ತಾಪುರ ಮಾತನಾಡಿ, ಗ್ರಾಮ ಸಭೆ ನಡೆಸಿ ಆಶ್ರಯ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿದ್ದೇವೆ. ಆದರೆ ಪಟ್ಟಿಗೆ ಅನುಮೋದನೆ ನೀಡುತ್ತಿಲ್ಲ ಎಂದರು.
ತಾಪಂ ಇಒ ಭಾರತಿ ಚಲುವಯ್ಯ ಮಾತನಾಡಿ, ಜಾಲವಾದ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಆಶ್ರಯ ಯೋಜನೆಗಳ ಫಲಾನುಭವಿಗಳ ಆಯ್ಕೆ ಬಗೆಗಿನ ದೂರು ಎಬಿಸಿಗೆ ಹೋಗಿದೆ. ಆದ್ದರಿಂದ ಅಲ್ಲಿ ಪುನಃ ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಅಧ್ಯಕ್ಷರು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರನ್ನು ಸನ್ಮಾನಿಸಿದರು. ತಾಪಂ ಅಧ್ಯಕ್ಷ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷೆ ಲಲಿತಾಬಾಯಿ ದೊಡ್ಡಮನಿ, ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ ಸೇರಿದಂತೆ ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.