ಆಳಂದ: ತಾಲೂಕಿನ ಮಾದನ ಹಿಪ್ಪರಗಾದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಮೂಲ ಸೌಲಭ್ಯ ಒದಗಿಸಲು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.
ಮಕ್ಕಳು ಶಾಲೆಯಿಂದ ಹೊರಗುಳಿ ಯುವುದನ್ನು ತಪ್ಪಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರ್ಕಾರವು 276 ಪದವಿ ಪೂರ್ವ ಕಾಲೇಜುಗಳನ್ನು “ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನಾಗಿ ಮಾಡಿ ಮಕ್ಕಳಿಗೆ ಒಂದೇ ಸೂರಿನ ಅಡಿ ಶಿಕ್ಷಣ ನೀಡುವಂತೆ ಕ್ರಮ ಕೈಗೊಂಡಿದೆ. ಆದರೆ ತಾಲೂಕಿನ ಮಾದನಹಿಪ್ಪರಗಾ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಮುಖ ಬದಲಾವಣೆ ಕಾಣದೇ ಅನುದಾನ ಮಾತ್ರ ಖರ್ಚು ಮಾಡಲಾಗುತ್ತಿದೆ ಎಂದು ಪಾಲಕರು ಆಪಾದಿಸಿದ್ದಾರೆ.
ಶಾಲೆಯಲ್ಲಿ ಎಲ್.ಕೆಜಿ. ಯುಕೆಜಿ 1ನೇ ಮತ್ತು 2ನೇ ಸೇರಿ 142 ಮಕ್ಕಳು ಓದುತ್ತಿದ್ದಾರೆ. ಈ ಮಕ್ಕಳಿಗೆ ಕ್ರೀಡೆ ಮತ್ತು ಶೈಕ್ಷಣಿಕ ಪರಿಕರಗಳು ಇಲ್ಲದೇ ದಿನದೊಡಲಾಗುತ್ತಿದೆ. ಸುಸಜ್ಜಿತ ವರ್ಗ ಕೋಣೆಗಳಿಲ್ಲ, ಕಪ್ಪು ಹಲಿಗೆ ನೀಡಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಗಣಕಯಂತ್ರ, ಪೀಠೊಪಕರಣಗಳು ಮೂಲೆ ಸೇರಿವೆ ಎನ್ನಲಾಗಿದೆ. ಶಾಲೆ ಕಟ್ಟಡದಲ್ಲಿ ಪ್ರಾಥಮಿಕ, ಪ್ರೌಢ ಪದವಿ ಪೂರ್ವ ಸೇರಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ನೀರಿನ ಕೊರತೆಯಿಂದ ಶೌಚಾಲಯ ಬಳಕೆಗೆ ಬಾರದೇ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗೆ ಈಗಾಗಲೆ 10ಲಕ್ಷ ರೂ. ವಾರ್ಷಿಕ ಅನುದಾನ ಹಾಗೂ 3ಲಕ್ಷ ರೂ. ಶಾಲೆ ನಿರ್ವಹಣೆಗಾಗಿ ಅನುದಾನ ಬಂದಿದೆ. ಇದರಲ್ಲಿ ಒಂದು ಲಕ್ಷ ರೂ. ಆಟದ ಸಾಮಗ್ರಿ, ಪೀಠೊಪಕರಣ ಖರೀದಿ ಮಾಡಲಾಗಿದೆ. ಸೂಕ್ತ ಕೋಣೆ ಇಲ್ಲದೇ ಇರವುದರಿಂದ ಕೋಣೆಯೊಂದರಲ್ಲಿ ಇಡಲಾಗಿದೆ. -ಟಿ.ಆರ್. ಪಾಟೀಲ, ಪ್ರಾಚಾರ್ಯ, ಕರ್ನಾಟಕ ಪಬ್ಲಿಕ್ ಶಾಲೆ
ಮಕ್ಕಳಿಗೆ ಒಂದೆ ಕಡೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ. ಆದರೆ ಶಾಲೆಯ ಶಿಕ್ಷಕರ ನಿಷ್ಕಾಳಜಿಯಿಂದಾಗಿ ಸಮರ್ಪಕವಾಗಿ ಸೌಲಭ್ಯಗಳ ನಿರ್ವಹಣೆ ಆಗುತ್ತಿಲ್ಲ. ತಕ್ಷಣ ಸುಧಾರಣೆ ಮಾಡದಿದ್ದರೇ ಮೇಲಧಿಕಾರಿಗಳ ಗಮನಕ್ಕೆ ತರಲಾಗವುದು.
-ಮಹಾದೇವ ಮೋಘಾ, ಮುಖಂಡ