ಕಲಬುರಗಿ: ಕೊರೊನಾ ಮೂರನೇ ಅಲೆ ಇನ್ನೆರಡು ತಿಂಗಳ ಅಂತರದಲ್ಲೇ ಕಾಲಿಡಲಿದೆ ಎಂಬುದಾಗಿ ತಜ್ಞರು ಹೇಳಿದ್ದರಿಂದ ಸರ್ಕಾರ ಕೂಡಲೇ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೊರೊನಾ ಮೊದಲ ಅಲೆಯಿಂದ ಪಾಠ ಕಲಿತರೂ ಎರಡನೇ ಅಲೆ ತಡೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಅನೇಕರು ತೊಂದರೆಗೆ ಒಳಗಾಗಿದ್ದಾರೆ. ಈಗ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ಮಕ್ಕಳಿಗೆ ಸೂಕ್ತ ರಕ್ಷಣೆ ಸಿಗುವಂತಾಗಲು ಜತೆಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಮೂರನೇ ಅಲೆಯು ಮಕ್ಕಳಿಗೆ ಮಾರಕ ಎಂದು ತಜ್ಞರು ಹೇಳಿದ್ದಾರೆ. ಅದಲ್ಲದೇ ದಕ್ಷಿಣ ಭಾರತಲ್ಲೇ ಅಪೌಷ್ಟಿಕತೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಭಾಗದಲ್ಲೇ ಇದ್ದಾರೆ. ನಮ್ಮ ಭಾಗದಲ್ಲಿ 4.60 ಲಕ್ಷ ಹಾಗೂ ಒಂದು ಲಕ್ಷ ಮಕ್ಕಳು ಕಲಬುರಗಿ ಜಿಲ್ಲೆಯಲ್ಲೇ ಇದ್ದಾರೆ. ಪ್ರಸಕ್ತ ಸಮೀಕ್ಷೆ ಪ್ರಕಾರ 1ರಿಂದ 5 ವರ್ಷದೊಳಗಿನ ಮಕ್ಕಳು 5 ಲಕ್ಷ, 6ರಿಂದ 16ರ ವರೆಗೆ 2.30 ಲಕ್ಷ ಮಕ್ಕಳಿದ್ದಾರೆ. ಇವರೆಲ್ಲರನ್ನು ಸಂರಕ್ಷಿಸಬೇಕಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಂಕಷ್ಟ ಎದುರಾದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಮಕ್ಕಳ ವಿಭಾಗದ ವ್ಯವಸ್ಥೆಯೇ ಇಲ್ಲ.
ಜೀಮ್ಸ್ ಹಾಗೂ ಇಎಸ್‌ಐ ಸೇರಿ 100 ಬೆಡ್ ಇವೆ. ಹೀಗಾಗಿ ಸರ್ಕಾರ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಮಕ್ಕಳಿಗೆ ನೀಡಲಾಗುವ μಝರ್ ಲಸಿಕೆ ಆಮದು ಮಾಡಿಕೊಂಡು ನೀಡಬೇಕು ಎಂದು ಆಗ್ರಹಿಸಿದ ಇಬ್ಬರು ನಾಯಕರು, ಬೇರೆ ಕಂಪನಿಗಳ ಲಸಿಕೆ ತರಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಆದ್ದರಿಂದ ನಿರ್ಲಕ್ಷ್ಯತನ ಬಿಟ್ಟು ಕೂಡಲೇ ಲಸಿಕೆ ಆಮದು ಮಾಡಿಕೊಳ್ಳಬೇಕು. ಅಲ್ಲದೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ರಾಜ್ಯದಲ್ಲಿ ರದ್ದು ಮಾಡಬೇಕೆಂದು ಸಲಹೆ ನೀಡಿದರು. ಧರ್ಮಸಿಂಗ್ ಫೌಂಡೇಷನ್‌ದಿಂದ ಈಗಾಗಲೇ ಆಕ್ಸಿಜನ್ ಸಿಲೆಂಡರ್ ನೀಡುವ ಮೂಲಕ ಕೋವಿಡ್ ಯುದ್ಧದಲ್ಲಿ ಜಿಲ್ಲಾಡಳಿತದ ಜತೆ ಕೈ ಜೋಡಿಸಿದೆ.
ಈಗ ಇಂಡೋನೆಷಿಯಾ, ಜಕಾರ್ತದಿಂದ 50 ಸಿಲಿಂಡರ್ ಆಮದು ಮಾಡಿಕೊಳ್ಳಲಾಗಿದೆ. ಜೂನ್ 3ರಂದು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗುವುದು ಎಂದು ಡಾ| ಅಜಯಸಿಂಗ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ವೈ. ಪಾಟೀಲ, ಖನೀಜ್ ಫಾತೀಮಾ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಅಲ್ಲಮಪ್ರಭು ಪಾಟೀಲ ನೆಲೋಗಿ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣಕುಮಾರ ಮೋದಿ, ಮುಖಂಡರಾದ ಸುಭಾಷ ಮುಂತಾದವರಿದ್ದರು.