Advertisement

ಲ್ಯಾಂಡ್‌ ಆರ್ಮಿಗೆ ನೋಟಿಸ್‌ ನೀಡಲು ಒತ್ತಾಯ

04:24 PM Sep 04, 2018 | |

ಎನ್‌.ಆರ್‌.ಪುರ: ಪಟ್ಟಣದ ಹಳೇಪೇಟೆಯಲ್ಲಿ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣ ಜವಾಬ್ದಾರಿ ಪಡೆದ ಲ್ಯಾಂಡ್‌ ಆರ್ಮಿಯವರು ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ, ಇದರಿಂದ ಲ್ಯಾಂಡ್‌ ಆರ್ಮಿಗೆ ನೋಟಿಸ್‌ ನೀಡುವಂತೆ ಸದಸ್ಯರು ಪ.ಪಂ. ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

Advertisement

 ಪ.ಪಂ. ಅಧ್ಯಕ್ಷ ಆರ್‌.ರಾಜಶೇಖರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಲಕ್ಷ್ಮಣ ಶೆಟ್ಟಿ, ಸುಕುಮಾರ್‌ ಮಾತನಾಡಿ, ಇದುವರೆಗೂ ಕೂಡ ಮೀನು ಮಾರುಕಟ್ಟೆ ಕಾಮಗಾರಿ ಪ್ರಾರಂಭಿಸಿಲ್ಲ. 

ಕಾಮಗಾರಿ ಪ್ರಾರಂಭಿಸುತ್ತಾರೆ ಎಂಬ ಉದ್ದೇಶದಿಂದ ಮೀನು ಮಾರುಕಟ್ಟೆಯಲ್ಲಿದ್ದ ಹಳೆಯ 6 ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಅಂಗಡಿ ಮಳಿಗೆಗಳನ್ನು ನೆಲಸಮ ಮಾಡದೇ ಇದ್ದಿದ್ದರೆ ಬಾಡಿಗೆಯಾದರೂ ಬರುತ್ತಿತ್ತು. ಪ.ಪಂ. ಆದಾಯವನ್ನೂ ಕಳೆದುಕೊಂಡಿದ್ದೇವೆ. ಮೀನು ಮಾರುಕಟ್ಟೆಯನ್ನೂ ಸಹ ಕಳಪೆ ಮಾಡಿದಲ್ಲಿ ಕಳಪೆ ಕಾಮಗಾರಿ ಮಾಡಿದ ಆರೋಪವನ್ನು ಜನಪ್ರತಿನಿಧಿಗಳಾದ ನಾವು ಎದುರಿಸಲು ಸಿದ್ಧವಿಲ್ಲ. ಆದ್ದರಿಂದ ಕೂಡಲೇ ಲ್ಯಾಂಡ್‌ ಆರ್ಮಿಯವರಿಗೆ ನೋಟಿಸ್‌ ನೀಡಿ ಎಂದು ಪ.ಪಂ. ಮುಖ್ಯಾಧಿಕಾರಿ ಕುರಿಯಕೋಸ್‌ ಅವರನ್ನು ಒತ್ತಾಯಿಸಿದರು.

ಪಟ್ಟಣದ ಅಗ್ನಿ ಶಾಮಕದಳ ಸಮೀಪದಲ್ಲಿ ಪ.ಪಂ.ಗೆ ಸೇರಿದ 1.20 ಎಕ್ರೆ ಜಾಗವನ್ನು ಪೋಡಿ ಮಾಡಿ ಜಾಗವನ್ನು ಗುರ್ತಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. ಮುಖ್ಯಾಧಿಕಾರಿ ಕುರಿಯಕೋಸ್‌ ಪ.ಪಂ.ಯ ಕಸವಿಲೇವಾರಿ ಘಟಕ ಸ್ಥಳಾಂತರಿಸುವಂತೆ ದ್ರುವತಾರೆ ಕನ್ನಡ ರಕ್ಷಣಾ ವೇದಿಕೆಯವರು ಹಾಗೂ ಲಿಂಗಾಪುರ ಗಾಮಸ್ಥರು ಮನವಿ ನೀಡಿದ್ದಾರೆ ಎಂದು ಸಭೆಗೆ ತಿಳಿಸಿದರು.

ಅಲ್ಲದೆ ಕಸವಿಲೇವಾರಿ ಘಟಕವನ್ನು 2001ರಲ್ಲಿಯೇ ಗುರ್ತಿಸಲಾಗಿದೆ. ಇದರ ಸುತ್ತಮುತ್ತಲಿನ 500 ಮೀಟರ್‌ ಅಳೆತ ಬಫರ್‌ ಜೋನ್‌ ಎಂದು ಘೋಷಿಸಲಾಗಿದೆ. ಆದರೂ ನಾಗಲಾಪುರ ಗ್ರಾ.ಪಂ ಯವರು ಅಲ್ಲಿ 2001ರ ನಂತರವೂ
ಕೂಡ ಹೊಸ ಮನೆಗಳಿಗೆ ಪರವಾನಗಿ ನೀಡಿದ್ದಾರೆ. ಇದರಿಂದ ಮನೆಗಳು ನಿರ್ಮಾಣವಾಗಿವೆ. ದ್ರುವತಾರೆ ಕರವೇಯವರು ಸ್ಥಳಾಂತರಕ್ಕೆ ಮನವಿ ನೀಡಿದ್ದಾರೆ. ಆದ್ದರಿಂದ ವೇದಿಕೆಗೆ ಹಾಗೂ ನಾಗಲಾಪುರ ಗ್ರಾ.ಪಂ.ಯವರಿಗೆ ಕಸವಿಲೇವಾರಿ ಘಟಕದಿಂದ 500 ಮೀಟರ್‌ ವ್ಯಾಪ್ತಿಗೆ ಬರುವ ಮನೆಗಳನ್ನು ತೆರವುಗೊಳಿಸಿಕೊಡುವಂತೆ ಹಿಂಬರ ನೀಡಿ ಎಂದರು. ನಂತರ ಸಭೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನ ಕೈಗೊಳ್ಳಲಾಯಿತು.

Advertisement

 ಸದಸ್ಯ ಲಕ್ಷ್ಮಣ ಶೆಟ್ಟಿ ಮಾತನಾಡಿ, ಪ.ಪಂ.ಯಲ್ಲಿ ಪಟ್ಟಣದ ವಾಸಿಗಳ ಕಟ್ಟಡ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆಗಳು ಹರಿದು ಹೋಗಿವೆ. ಇದರಿಂದ ಜನರು ಖಾತೆ ಮಾಡಿಸಿಕೊಳ್ಳಲು ತೊಂದರೆಯಾಗುತ್ತಿದೆ. ನಮ್ಮ ಪ.ಪಂ. ಕಚೇರಿಯಿಂದ ಆಗಿರುವ ತಪ್ಪಿಗೆ ಜನರು ಪರದಾಡುವಂತಾಗಿದೆ. ಆದ್ದರಿಂದ ನಿವೇಶನಕ್ಕೆ ಸಂಬಂಧಿಸಿದ ದಾಖಲೆ, ಅಸಸ್‌ಮೆಂಟ್‌ ಆಧಾರದ ಮೇಲೆ ಇ-ಸ್ವತ್ತು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

 ಪ.ಪಂ. ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಸಮೀರಾನಯೀಂ, ಅಬ್ದುಲ್‌ಸುಬಾನ್‌, ಆಶಾ ಶ್ರೀನಾಥ್‌, ನಾಗರತ್ನ, ಸುನೀಲ್‌ ಕುಮಾರ್‌, ಬಿಳಲ್‌ ಮನೆ ಉಪೇಂದ್ರ, ಲೆಕ್ಕಾಧಿಕಾರಿ ಉಷಾ, ಭವಾನಿ, ಛಾಯಾದೇವಿ, ಲಕ್ಷ್ಮ ಗೌಡ, ಕೃಷ್ಣಪ್ಪ, ಚಂದ್ರಕಾಂತ್‌, ವಿಜಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next