ಮಾಗಡಿ: ಅರಣ್ಯ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿರುವ ಗ್ರಾಪಂ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅರಣ್ಯ ಭೂಮಿಯ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ನೇತೃತ್ವ ದಲ್ಲಿ 250ಕ್ಕೂ ಹೆಚ್ಚು ಅರಣ್ಯವಾಸಿಗಳು ಹಂಚಿಕುಪ್ಪೆ ಗ್ರಾಪಂ ಮುಂಭಾಗ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಇಒ ಪ್ರದೀಪ್ ನಿಮ್ಮ ಬೇಡಿಕೆಯನ್ನು ನಿಯಮಾನುಸಾರ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು, ಈ ವೇಳೆ ತಾಪಂ ಅಧ್ಯಕ್ಷ ಧನಂಜಯ ನಾಯಕ್, ದಲಿತ ಮುಖಂಡ ದೊಡ್ಡಯ್ಯ, ದೊಡ್ಡಿ ಲಕ್ಷ್ಮಣ ಪ್ರತಿಭಟನೆಗೆ ಕೈಜೋಡಿಸಿ ಅರಣ್ಯವಾಸಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ: ಇದೇ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್ ಮಾತನಾಡಿ, ನೂರಾರು ವರ್ಷಗಳಿಂದ ಇರುಳಿಗರು ಅರಣ್ಯದಲ್ಲಿ ವಾಸ ಮಾಡಿಕೊಂಡು ಕಾಡುಗಳನ್ನು ಸಂರಕ್ಷಿಸಿದ್ದಾರೆ. ಸರ್ಕಾರ ಇವರಿಗೆ ಭೂಮಿ ನೀಡಬೇಕು. ಮೈಸೂರು ಮಹಾರಾಜರ ಕಲದಲ್ಲಿ ಇತರೆ ಜನಾಂಗಕ್ಕೂ ಭೂಮಿ ನೀಡಿರುವ ಬಗ್ಗೆ ದಾಖಲೆಗಳಿದ್ದರೂ ಅಧಿಕಾರಿಗಳು ದಾಖಲೆಗಳನ್ನು ೕಕ್ಷಿಸದೆ ನಿರ್ಲಕ್ಷಿಸಿ ಕಾಡಿನಿಂದ ಒಕ್ಕಲೆಬಿಸಮಿತ್ತಿದ್ದಾರೆ ಎಂದು ಆರೋಪಿಸಿದರು.
ಪ್ರದೀಪ್ ಅವರು ಜಿಲ್ಲಾಧಿಕಾರಿ, ಸಿಇಒ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿ ಇವರಿಗೆ ನ್ಯಾಯಕೊಡಿಸಿ ಇಲ್ಲದಿದ್ದರೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ಅದೇಶ ಉಲ್ಲಂಘನೆ: ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 13 ವರ್ಷ ಕಳೆದರೂ ಜಿಲ್ಲೆಯಲ್ಲಿ ಕೆಲವೆ ಕೆಲವು ಹಳ್ಳಿಗಳಿಗೆ ಮಾತ್ರ ಹಕ್ಕು ಪತ್ರನೀಡಿದೆ. ಪ್ರಮುಖವಾಗಿ 1980ರಲ್ಲಿ ಅರಣ್ಯ ಇಲಾಖೆಯ ಸಂರಕ್ಷಣೆ ಕಾಯ್ದೆಯ ಪ್ರಕಾರ ಒಕ್ಕಲೆಬ್ಬಿಸಿದ ಜಾಗದ ಬಗ್ಗೆ ಅರ್ಜಿಸಲ್ಲಿಸಿದರು ಇಲ್ಲಿಯವರೆಗೂ ಪರಿಗಣಿಸದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಅದೇಶವನ್ನು ಉಲ್ಲಂಸಿರುವ ಮೂರು ಪಂಚಾಯ್ತಿಗಳ ಪಿಡಿಒಗಳನ್ನು ಅಮಾನತುಗೊಳಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಜನಾಂಗ ಇರುವಕಡೆ ಇರುವ ಕುರುಹುಗಳನ್ನು ನೋಡಿ ಪರಿಶೀಲಿಸಿ ನ್ಯಾಯಬದ್ಧ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.
45 ದಿನ ಅಹೋರಾತ್ರಿ ಧರಣಿ: ನಮ್ಮ ಹಕ್ಕುಗಳ ಬಗ್ಗೆ 2014 ರಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 45 ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆ ಮಾಡಿದರೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ದಲಿತ ಮುಖಂಡ ದೊಡ್ಡಯ್ಯ, ರಾಮನಗರ ಇರುಳಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು, ಮುಖಂಡರಾದ ಅಟ್ಟ ಬರಿಯಪ್ಪ,ರಾಮಯ್ಯ, ಪುಟ್ಟಮಾರಯ್ಯ, ಬಾಲರಾಜು, ಮರಿಯಪ್ಪ, ಚಿನ್ನ ಎಳವಯ್ಯ ಇತರರು ಇದ್ದರು.