ಯಾದಗಿರಿ: ಗಡಿ ಜಿಲ್ಲೆ ಯಾದಗಿರಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿ ಈ ಭಾಗದಲ್ಲಿ ಕೈಗಾರಿಕೆಗಳಿಗೆ ಉತ್ತೇಜನೆ ನೀಡಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಮತ್ತು ಗುಡಿ ಕೈಗಾರಿಕೆಗಳು ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ಸೂಕ್ತ ಸೌಕರ್ಯಗಳನ್ನು ಕಲ್ಪಿಸಬೇಕು. ಉದ್ಯಮಶೀಲತೆ ತರಬೇತಿ ಮೂಲಕ ಗ್ರಾಮೀಣ ಯುವಜನರ ಉದ್ಯಮಶೀಲತಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ತರಬೇತಿ ಪಡೆದ ನಂತರ ಉದ್ದಿಮೆಗಳನ್ನು ಪ್ರಾರಂಭಿಸಲು ನಿಯಮಗಳನ್ನು ಸಡಿಲಿಸಿ ತ್ವರಿತ ಸಾಲ ವಿತರಣಾ ವ್ಯವಸ್ಥೆಯನ್ನು ರೂಪಿಸಿ, ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸೂಕ್ಷ¾ ಉದ್ಯಮಗಳಿಗೆ ಮೀಸಲಾದ ಯೋಜನೆಗಳನ್ನು 2021-22ರ ಬಜೆಟ್‌ನಲ್ಲಿ ಘೋಷಿಸಲು ಒತ್ತಾಯಿಸಿದರು.
ಕೋವಿಡ್ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳು ಸಂಕಷ್ಟದಲ್ಲಿದ್ದು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಈ ಮಧ್ಯೆಯೇ ವಿದ್ಯುತ್ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಉತ್ಪನ್ನಗಳನ್ನು ನಿಲ್ಲಿಸುವಂತಾಗಿದೆ. ಹಾಗಾಗಿ 18% ಇದ್ದ ಜಿಎಸ್‌ಟಿ ತೆರಿಗೆಯನ್ನು 12%ಗೆ ಇಳಿಸಿ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಜಿಲ್ಲೆಯ ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮದ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ಜಿಲ್ಲಾ ಕೇಂದ್ರಕ್ಕೆ ಹತ್ತಿರವಿರುವ ಆಶನಾಳ ಬಳಿಯ 302 ಎಕರೆ ಜಮೀನಿನಲ್ಲಿ ಸೌಕರ್ಯಗಳನ್ನು ಕಲ್ಪಿಸಬೇಕು. ಹತ್ತಿರದಲ್ಲಿಯೇ ಗುಡಿ ಕೈಗಾರಿಗೆಗಳು ಆರಂಭವಾಗುವುದರಿಂದ ಸಾಕಷ್ಟು ಅನುಕೂಲವಾಗಲಿದ್ದು, ಈ ಬಗ್ಗೆ ಸಂಬಂಧಿ ಸಿ ಸಚಿವರು ಮತ್ತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎನ್. ಆರ್. ಜಗದೀಶ್, ಜಂಟಿ ಕಾರ್ಯದರ್ಶಿ ಚನ್ನಬಸಪ್ಪ ಹೊಂಡದಕಟ್ಟಿ, ಖಜಾಂಚಿ ಎಸ್. ಶಂಕರನ್, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಹನುಮದಾಸ ಮುಂದಡಾ, ಭೀಮಾಶಂಕರ ಪಾಟೀಲ, ಚನ್ನಮಲ್ಲಿಕಾರ್ಜುನ ಅಕ್ಕಿ ಇದ್ದರು.