Advertisement

ಗೋವಿನಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಲು ಒತ್ತಾಯ

03:20 PM Nov 30, 2017 | Team Udayavani |

ಬ್ಯಾಡಗಿ: ಮೆಕ್ಕೆಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ಘೋಷಣೆಯಾಗಬೇಕು ಮತ್ತು ತಾಲೂಕಿಗೊಂದು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ, ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಬುಧವಾರ ಧೀಡಿರನೆ ತಹಶೀಲ್ದಾರ ಕಚೇರಿ ಎದುರು ಸೇರಿದ ರೈತ ಸಂಘದ ನೂರಾರು ಸದಸ್ಯರು, ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಖರೀದಿ ಕೇಂದ್ರ ಆರಂಭಿಸದಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ  ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಸೂಕ್ತ ದರ ಸಿಗದೇ ಇರುವುದರಿಂದ ಕಳೆದ ಐದಾರು ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ರಸ್ತೆ ಪಾಲಾಗುತ್ತಿವೆ. ಇವೆಲ್ಲಾ ವಿಷಯಗಳು ಸರ್ಕಾರದ ಗಮನದಲ್ಲಿದ್ದರೂ ರೈತರು ಪ್ರತಿಭಟನೆ ಮಾಡುವವರೆಗೂ ಯಾವುದೇ ಕ್ರಮಗಳನ್ನು ಜರುಗಿಸುತ್ತಿಲ್ಲ. ಇದೀಗ ಗೋವಿನಜೋಳದ ಬೆಲೆ ಕುಸಿದಿದ್ದು, ಕಣ್ಣೊರೆಸುವ ತಂತ್ರ ಅನುಸರಿಸಿ ಸರಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಯಾವುದಕ್ಕೂ ಸಾಕಾಗದು. ಮೆಕ್ಕೆಜೋಳಕ್ಕೆ ಕನಿಷ್ಠ 2 ಸಾವಿರ ರೂ. ದರ ನಿಗದಿ ಮಾಡುವಂ ತೆ ಆಗ್ರಹಿಸಿದರು.

ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ರೈತರ ತಾಳ್ಮೆಯನ್ನು ಪರೀಕ್ಷಿಸಲು ಸರ್ಕಾರ ಮುಂದಾಗಬಾರದು ಡಿ. 4ರೊಳಗಾಗಿ ತಾಲೂಕಿಗೊಂದರಂತೆ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದರೆ ಡಿ. 5ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಂತ್ರಿಗಳಿಗೆ ಘೇರಾವ್‌ ಹಾಕಲಾಗುವುದು ಎಂದರು.

ಕಿರಣ ಗಡಿಗೋಳ, ಮಲ್ಲೇಶಪ್ಪ ಡಂಬಳ, ಶಶಿಧರಸ್ವಾಮಿ ಛತ್ರದಮಠ, ಶೇಖಪ್ಪ ಕಾಶಿ, ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ಅಶೋಕ ಮಾಳೇನಹಳ್ಳಿ ಸೇರಿದಂತೆ ಇನ್ನಿತರ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next