ರೋಣ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿದ ಕೆಲಸಕ್ಕೆ 15 ದಿನ ಕಳೆದರೂ ಇಲ್ಲಿಯವರೆಗೆ ಕೂಲಿ ನೀಡಿಲ್ಲ ಎಂದು ಆರೋಪಿಸಿ ತಾಲೂಕಿನ ಅಸೂಟಿ ಹಾಗೂ ಕರಮುಡಿ ಗ್ರಾಮಸ್ಥರು ಸೋಮವಾರ ತಾಪಾಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ರತ್ನವ್ವ ತಳವಾರ ಮಾತನಾಡಿ, ಕಳೆದ ಮೂರು ವರ್ಷದಿಂದ ಗ್ರಾಮದಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲ್ಲೆಯಲ್ಲಿ ಬೆಳೆ ಇಲ್ಲದೆ ತುತ್ತು ಕೂಳಿಗಾಗಿ ಪರಿತಪಿಸುವಂತಾಗಿದೆ. ಸರ್ಕಾರದಿಂದ ನೀಡುವ ಉದ್ಯೋಗ ಖಾತ್ರಿ ಯೋಜನೆಯಲ್ಲಾದರೂ ಕೆಲಸ ಮಾಡಿ ಜೀವನ ಸಾಗಿಸೋಣ ಎಂದರೆ ಮಾಡಿದ ಕೂಲಿಗೆ ಹಣ ಸಂದಾಯ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎರಡು ತಿಂಗಳು ದುಡಿದರೆ ಕೇವಲ ಒಂದು ವಾರ ಎರಡು ವಾರಗಳ ಕೂಲಿ ಹಣವನ್ನು ಮಾತ್ರ ನೀಡುತ್ತಾರೆ. ಉಳಿದ ಕೂಲಿ ಹಣ ಸಂದಾಯ ಮಾಡುವಂತೆ ಕೇಳಿದರೆ ಎನ್‌ಎಂಆರ್ ಹಾಕಬೇಕು, ಎಂಐಎಸ್ ಮಾಡಬೇಕು ಎಂದು ನಾನಾ ಕಾರಣಗಳನ್ನು ಹೇಳಿ ಸತಾಯಿಸುತ್ತಿದ್ದಾರೆ. ನಮ್ಮ ಜೀವನ ನಿರ್ವಹಣೆಗೆ ಏನು ಮಾಡಬೇಕು ಎಂದು ತಮ್ಮ ಅಸಾಯಕತೆ ತೋಡಿಕೊಂಡರು.
ಬಸಪ್ಪ ಚಲವಾದಿ ಮಾತನಾಡಿ, ಕರಮುಡಿ ಗ್ರಾಮದ ಜಲಾಯನ ಆಧಾರದ ಮೇಲೆ ಬದುವು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿದ್ದೇವೆ. 14 ದಿನಗಳು ದುಡಿದರೂ ಕೇವಲ ಮೂರು ದಿನ ಕೆಲಸ ಮಾಡಿದ್ದಿರಿ ಎಂದು ಹೇಳುತ್ತಾರೆ. ಉಳಿದ ದಿನಗಳಿಗೆ ಎನ್‌ಎಂಆರ್ ಹಾಕಬೇಕು, ಹಾಕುತ್ತೇವೆ, ಮೇಲಾಧಿಕಾರಿಗಳು ಹೆಬ್ಬೆಟ್ಟು ಗುರುತು ನೀಡಿಲ್ಲ ಎಂಬ ಕಾರಣ ಹೇಳಿ ನಮ್ಮನ್ನು ಸತಾಯಿಸುತ್ತಿದ್ದಾರೆ. ಬರಗಾಲ ಇರುವುದರಿಂದ ನಮಗೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸವೇ ಜೀವನಕ್ಕೆ ಆಧಾರವಾಗಿದೆ. ಆದರೆ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಸಮರ್ಪಕ ಕೂಲಿ ನೀಡಲು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಅಧಿಕಾರಿ ಭರವಸೆ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಶಿವಪ್ಪ ಚಲುವಾದಿ, ಯಲ್ಲಮ್ಮ ತಳವಾರ, ಶಂಕ್ರಪ್ಪ ತಳವಾರ, ಮೈಲಾರ ಚಲುವಾದಿ, ಶಿವನಗೌಡ ಕೆಂಚಪ್ಪಗೌಡ್ರ, ಸಂಗಪ್ಪ ಚಲುವಾದಿ, ವೀರಸಂಗಯ್ಯ ಹಿರೇಮಠ, ಅಶೋಕ ಚಲುವಾದಿ, ಹನುಮಪ್ಪ ನಿಂಬಣ್ಣವರ, ಯಲ್ಲಪ್ಪ ಜಾಲಿಹಾಳ, ಹನುಮಂತಪ್ಪ ಮೊರಬದ, ಶರಣಪ್ಪಗೌಡ ತಿಮ್ಮಪ್ಪಗೌಡ್ರ, ಶಿವನಪ್ಪ ಕೊಳ್ಳೂರ ಸೇರಿದಂತೆ ಮತ್ತಿತರರು ಇದ್ದರು.