Advertisement

ಕಲಾವಿದರಿಗೆ 5 ಸಾವಿರ ಮಾಸಾಶನ ನೀಡಲು ಒತ್ತಾಯ

04:09 PM Mar 22, 2022 | Team Udayavani |

ಮಾನ್ವಿ: ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಭಾಗದ ಜನಪದ ಕಲಾವಿದರಿಗೆ ಮಾಸಿಕ 5 ಸಾವಿರ ಮಾಸಾಶನ ನೀಡುವಂತೆ ಹಾಗೂ ವಿವಿಧ ಅಕಾಡೆಮಿಗಳಿಂದ ನೀಡುವ ಪ್ರಶಸ್ತಿಗಳಿಗೆ ಈ ಭಾಗದ ಕಲಾವಿದರನ್ನು ಗುರುತಿಸುವಂತೆ, ಸರ್ಕಾರದ ಉತ್ಸವಗಳಲ್ಲಿ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

Advertisement

ಪಟ್ಟಣದ ಧ್ಯಾನ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ತಾಲೂಕು ಘಟಕ ವತಿಯಿಂದ ನಡೆದ ಕಲಾವಿದರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಜನಪದ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ವಿವಿಧ ಜನಪದ ಕಲೆಗಳ ತವರೂರು. ಈ ಭಾಗದಲ್ಲಿ ಹಲಗೆ ಕುಣಿತ ಹಾಗೂ ದೊಡ್ಡಾಟ ಪ್ರಸಿದ್ಧಿ ಪಡೆದಿದ್ದರೂ ಕಲಾವಿದರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಲು ಅಲೆಮಾರಿ ಜೀವನವೇ ಕಾರಣ. ಆರ್ಥಿಕವಾಗಿ ಹಿಂದುಳಿದಿರುವ ಈ ಭಾಗದ ಕಲಾವಿದರನ್ನು ಗುರುತಿಸುವ ಕಾರ್ಯವಾಗಬೇಕು. ಅವರಿಗೆ ಗುರುತಿನ ಚೀಟಿ ನೀಡಿ ನೊಂದಾಯಿಸಿದಾಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಎಂದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ಬಯಲಾಟ ಕಲೆಗೂ ದೈವದ ಸ್ವರೂಪ ನೀಡುವ ಮೂಲಕ ವಿಶ್ವಮಾನ್ಯತೆ ಒದಗಿಸಲು ಇಲ್ಲಿನ ಜನಪದ ತಜ್ಞರು, ರಂಗ ಕಲಾವಿದರು, ತಂತ್ರಜ್ಞರು, ಸಾಹಿತಿಗಳು ಸೇರಿ ಜನಪದ ಕಲಾವಿದರ ಕಾರ್ಯಾಗಾರ ನಡೆಸುವ ಮೂಲಕ ಈ ಭಾಗದ ಜನಪದ ಕಲೆಗಳಿಗೆ ಹೊಸರೂಪ ನೀಡುವಂತೆ ತಿಳಿಸಿದರು.

ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭಧಲ್ಲಿ ಹಿರಿಯ ಜನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಪಟ್ಟಣದ ವಾಲ್ಮೀಕಿ ವೃತ್ತದಿಂದ ಧ್ಯಾನಮಂದಿರದವರೆಗೆ ವಿವಿಧ ವೇಷ ಹಾಕಿದ ವೇಷಗಾರರು ಹಾಗೂ ಕಲಾವಿದರು ಕಲೆ ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಸಾಗಿದರು.

Advertisement

ಈ ವೇಳೆ ಒಕ್ಕೂಟದ ರಾಜ್ಯ ಸಹ ಕಾರ್ಯದರ್ಶಿ ಅಂಬ್ರೇಶ ಅಸಮಕಲ್‌, ಜಿಲ್ಲಾಧ್ಯಕ್ಷ ಪ್ರಕಾಶ ನಂದಿ, ತಾಲೂಕು ಗೌರವಾಧ್ಯಕ್ಷ ವೈ. ಚಂದ್ರಶೇಖರಗೌಡ, ತಾಲೂಕು ಅಧ್ಯಕ್ಷ ಮುಸಲಯ್ಯ ನಾಯಕ, ಚೆನ್ನಪ್ಪ, ಎಂ. ಲಾಲಪ್ಪ, ರವಿ ಪಾಟೀಲ್‌, ವೀರೇಶ ನಾಯಕ ಬೆಟ್ಟದೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next