Advertisement

ಬೇಡಿಕೆಗಳ ಈಡೇರಿಕೆಗೆ ಒತ್ತಾಯ

01:08 PM Jan 10, 2020 | Team Udayavani |

ಹೊಸಕೋಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ತಾಲೂಕು ಸಿಐಟಿಯು ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಕನಿಷ್ಠ ವೇತನ ಜಾರಿಗೊಳಿಸಿ: ತಾಲೂಕು ಸಿಐಟಿಯು ಅಧ್ಯಕ್ಷ ಹರೀಂದ್ರ ಮಾತನಾಡಿ, ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ, ಪರ್ಯಾಯ ಆರ್ಥಿಕ ನೀತಿಗಳಿಗಾಗಿ 12 ಅಂಶಗಳ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಸಲುವಾಗಿ ದೇಶದಾದ್ಯಂತ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರವ್ಯಾಪಿ 21 ಸಾವಿರ ರೂ.ಗಳ ಸಮಾನ ಕನಿಷ್ಠ ವೇತನ ಜಾರಿಗೊಳಿಸುವ ಮೂಲಕ ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿ ಕೊಡಬೇಕು. ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯ ಗಳನ್ನು ಸ್ಥಾಪಿಸಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಬೆಲೆ ಏರಿಕೆ ನಿಯಂತ್ರಣಗೊಳಿಸಿ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸುವುದರಿಂದ ಬಡಜನರಿಗೆ ಅನುಕೂಲವಗಲಿದೆ ಎಂದರು.

ಪ್ರಸ್ತುತ ಉದಾರೀಕರಣ, ಜಾಗತೀಕರಣ ನೀತಿಯ ಫ‌ಲವಾಗಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದಾಗಿ ಬಹಳಷ್ಟು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು, ಅಸಂಘಟಿತ ಕಾರ್ಮಿಕರು ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿ ಪಡೆಯಲು ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲ ಪಡಿಸಬೇಕು. ಡಾ: ಸ್ವಾಮಿನಾಥನ್‌ ವರದಿ ಜಾರಿಗೊಳಿಸಿ ರೈತರ ಸಾಲ ಮನ್ನಾಗೊಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಲು ಪ್ರೋತ್ಸಾಹಿಸಬೇಕು. ಸಾರ್ವಜನಿಕ ಉದ್ಯಮಗಳ, ರೈಲ್ವೆ ಮುಂತಾದ ಇಲಾಖೆಗಳ ಖಾಸಗೀಕರಣಗೊಳಿಸಬಾರದು, ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್‌, ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂಬುದು ಕಾರ್ಮಿಕ ಸಂಘಗಳ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.

ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಆರ್‌.ಆರ್‌.ಮನೋಹರ್‌,ಎಚ್‌.ಎನ್‌. ಮೋಹನ್‌ ಬಾಬು, ವೆಂಕಟ ರಾಜ್‌, ಸಮೀರ್‌, ಕೆ.ಎಂ. ರವಿಕುಮಾರ್‌, ಕೆಂಚೇಗೌಡ ಮುಂತಾದವರು ಭಾಗವಹಿಸಿದ್ದರು. ನಗರದ ವಿಶ್ವೇಶ್ವರಯ್ಯ ಬಡಾವಣೆಯ ಸಿಐಟಿಯು ಕಚೇರಿಯಿಂದ ತಾಲೂಕು ಕಚೇರಿ ಯವರೆವಿಗೂ ಮೆರವಣಿಗೆಯಲ್ಲಿ ತೆರಳಿದ ಕಾರ್ಮಿಕರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next