ಸಿಂದಗಿ: ತಾಲೂಕಿನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ.ಎಸ್. ಕಡಕಬಾವಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಬಸನಗೌಡ ಧರ್ಮಗೊಂಡ ಮಾತನಾಡಿ, ಸಕಾಲಕ್ಕೆ ಮಳೆಯಾಗದೇ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿರುವ ರೈತರ ಸ್ಪಂದನೆಗೆ ಯಾವ ರಾಜಕೀಯ ಪಕ್ಷಗಳು ಮುಂದೆ ಬರುತ್ತಿಲ್ಲ. ಅಲ್ಲದೆ ಸತತ ಬರಗಾಲ ಆವರಿಸಿದ್ದರಿಂದ ಸರ್ಕಾರ ಸಿಂದಗಿ ತಾಲೂಕನ್ನು ಬರಗಾಲ ಅಂಥ ಘೋಷಣೆ ಮಾಡಿದಾಗ್ಯೂ ಸಹ ಇನ್ನೂವರೆಗೆ ಯಾವ ರೈತರಿಗೆ ಬರಗಾಲ ಪರಿಹಾರ ದೊರಕಿಸಿ ಕೊಟ್ಟಿಲ್ಲ. ಜಾನುವಾರು ಉಳುವಿಗೆ ಇನ್ನು ಮೇವು ಬ್ಯಾಂಕ್ ಸ್ಥಾಪನೆ ಆಗಿಲ್ಲ ಎಂದು ಆರೋಪಿಸಿದರು.
ಕೂಡಲೇ ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು. ಕೂಡಲೇ ¸ರಗಾಲ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು. ಮತ್ತು ಈ ಸದ್ಯ ಅಲ್ಪ ಸ್ವಲ್ಪ ಮಳೆಯಾಗಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಉಚಿತವಾಗಿ ರೈತರಿಗೆ ಪೂರೈಸಬೇಕು ಎಂದು ಆಗ್ರಹಿಸಿದರು.
ಎಡದಂಡೆ ಕಾಲುವೆ ಕೃಷ್ಣಾ ಭಾಗ್ಯ ಜಲ ನಿಗಮ ಕಾಲುವೆಗೆ ನೀರು ಹರಿಸಬೇಕು. ಪ್ರಧಾನ ಮಂತ್ರಿ ಫಸಲ್ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಕಟ್ಟಿದ್ದು ಬೆಳೆ ನಷ್ಟವಾದರು ಕೂಡಾ ಇನ್ನು ಪರಿಹಾರ ರೈತರ ಖಾತೆಗೆ ಜಮೆಯಾಗಿಲ್ಲ. ಸರ್ಕಾರ ಮದ್ಯಸ್ಥಿಕೆ ವಹಿಸಿ ವಿಮಾ ಕಂಪನಿಯಿಂದ ನಷ್ಟ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದರೆ ರೈತರು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಶಿವಾನಂದ ಬಿರಾದಾರ ಕೈನೂರ, ಮಲ್ಲಪ್ಪ ಬೊಮ್ಮನಳ್ಳಿ ಕೊಕಟನೂರ, ಸಂಗಮೇಶ ಬೆಗರಿ ಖೈನೂರ, ಪರಶುರಾಮ ಮುರುಡಿ, ಮಲಕಾರಿಸಿದ್ದ ಒಡೆಯರ, ಮಾರುತಿ ಉಕಮನಾಳ, ಮತ್ತಣ್ಣ ಬಿರಾದಾರ, ಸುರೇಶ ಕನ್ನೊಳ್ಳಿ, ಸಿದ್ದಣ್ಣ ಒಡೆಯರ, ಸಾಹೇಬಗೌಡ ಬಂಟನೂರ, ಜಾದುಸಿದ್ದ ಒಡೆಯರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.