Advertisement

ಅಧ್ಯಯನ ಸಮಿತಿ ರಚನೆಗೆ ಒತ್ತಾಯ

11:45 AM Mar 02, 2018 | |

ಚಿಂಚೋಳಿ: ಕುಂಚಾವರಂ ಅರಣ್ಯಪ್ರದೇಶದಲ್ಲಿರುವ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ಏಕೆ ನಡೆಯುತ್ತಿದೆ ಎಂಬುದರ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ ಸಮಿತಿ ರಚಿಸಬೇಕು ಎಂದು ಕೇಂದ್ರ ಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ರಾಜ್ಯ ಸಂಚಾಲಕ ಸುಭಾಶ ರಾಠೊಡ ಆಗ್ರಹಿಸಿದರು.

Advertisement

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಚಂದು ನಾಯಕ ತಾಂಡಾದಲ್ಲಿ ನವಜಾತ ಹೆಣ್ಣು ಶಿಶು ಮಾರಾಟ ಪ್ರಕರಣ ಅತ್ಯಂತ ದುಃಖಕರವಾದ ಸಂಗತಿ. ಜಿಲ್ಲಾ ಮತ್ತು ತಾಲೂಕು ಆಡಳಿತ ಇಂತಹ ಪ್ರಕರಣ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.

ಚಂದು ನಾಯಕ ತಾಂಡಾದಲ್ಲಿ ನವಜಾತ ಹೆಣ್ಣು ಶಿಶು ಮಾರಾಟ ಪ್ರಕರಣದಲ್ಲಿ ಆರೋಪಿತರಾದ ಟಿ. ಪಾಲ್‌ ಮತ್ತು ಆತನ ಪತ್ನಿ ಶಾರದಾ ಅವರ ಹಿಂದೆ ಕ್ರಿಶ್ಚಿಯನ್‌ ಮಿಶನರಿಗಳ ಕೈವಾಡ ಇದೆ. ಅಲ್ಲದೇ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳಿಸುವ ಸಂಬಂಧ ಆಸೆ ಅಮಿಷ ನೀಡುವವರು ಹೆಚ್ಚು ಓಡಾಡುತ್ತಿದ್ದಾರೆ. ಇದರೆ ಬಗ್ಗೆ ಪೊಲೀಸರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಕುಂಚಾವರಂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಲಂಬಾಣಿ ಜನಾಂಗಕ್ಕೆ ಕೆಲಸ ಕೊಟ್ಟರೆ ಇಂತಹ ಪ್ರಕರಣಗಳು ನಿಲ್ಲುತ್ತವೆ. ಅಲ್ಲಿನ ಜನರ ಆರ್ಥಿಕ ಸ್ಥಿತಿಗತಿ ಬಗ್ಗೆ ಯಾರು ಗಮನಹರಿಸುತ್ತಿಲ್ಲ. ಆದರೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ ಹೊರತು ಹೆಣ್ಣು ಶಿಶು ಮಾರಾಟ ಏಕೆ ನಡೆದಿದೆ ಎಂಬುದನ್ನು ಅರಿತುಕೊಂಡಿಲ್ಲ ಎಂದು ದೂರಿದರು.

ಆರು ಜನ ಹೆಣ್ಣು ಮಕ್ಕಳನ್ನು ಹೊಂದಿರುವ ಅನುಸೂಯಾ ರಾಮಚಂದ್ರ ಅವರಿಗೆ ಸ್ವಂತ ಮನೆಯಿಲ್ಲ. ಅಂಗನವಾಡಿ ಕೇಂದ್ರದ ಸಣ್ಣ ಕೋಣೆಯಲ್ಲಿ ಉಪಜೀವನ ಸಾಗಿಸುತ್ತಿದ್ದಾರೆ. ಆದರೆ ಹೆಣ್ಣು ಶಿಶು ಮಾರಾಟ ಮಾಡಿರುವುದು ತಪ್ಪು ಎಂದರು. 

Advertisement

ಕುಂಚಾವರಂ ಪ್ರದೇಶದಲ್ಲಿ ಜನರ ಕಡು ಬಡತನ ಮತ್ತು ಅಸಹಾಯಕತೆ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆದು ಬೆಳಕು ಚೆಲ್ಲುವ ಕೆಲಸ ಮಾಡಬೇಕು. 2011ರಲ್ಲಿ ವನ್ಯ ಜೀವಿಧಾಮ ಘೋಷಣೆ ಆದ ನಂತರ ತಾಂಡಾದ ಜನರು ಅರಣ್ಯದೊಳಗೆ ಹೋಗುವಂತಿಲ್ಲ. ಇದಕ್ಕೂ ಮೊದಲು ಸೀತಾಫಲ, ಅಂಟು, ಹಿಪ್ಪುನೇರಳೆ, ಹುಲ್ಲು, ಹುಣಸೆಹಣ್ಣು ಮಾರಾಟ ಮಾಡಿ
ಜೀವನ ಸಾಗಿಸುತ್ತಿದ್ದರು. ಈಗ ಅದು ನಿಂತು ಹೋಗಿದೆ ಎಂದು ತಿಳಿಸಿದರು. 

ಕುಂಚಾವರಂ ಗಡಿಯಲ್ಲಿ 34 ತಾಂಡಾಗಳಿವೆ. ಇಲ್ಲಿ ಅನಕ್ಷರತೆ, ಮೂಢನಂಬಿಕೆ ಇನ್ನು ಕಡಿಮೆ ಆಗಿಲ್ಲ. ಜಿಲ್ಲಾಡಳಿತ ಕುಂಚಾವರಂ ಪ್ರದೇಶದತ್ತ ಗಮನ ಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಬಂಜಾರ ವಿಕಾಸ ಸಮಾಜ ಅಧ್ಯಕ್ಷ ಕುನಾಲ್‌ ಚವ್ಹಾಣ, ಆನಂದ ಜಾಧವ, ಮೋಹನ ಪವಾರ, ರವಿ ರಾಠೊಡ, ಶಂಕರ ರಾಠೊಡ, ಗಂಗಾಧರ,ಚಾಂದಪಾಶಾ ಸುದ್ದಿಗೋಷ್ಠಿಯಲ್ಲಿದ್ದರು.

ಪಾಟೀಲ-ಜಾಧವಗೆ ಇಲ್ಲ ಗಂಭೀರತೆ
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕು ಚಂದು ನಾಯಕ ತಾಂಡಾದಲ್ಲಿ ಮಕ್ಕಳ ಮಾರಾಟ ಪ್ರಕರಣ ವರದಿಯಾದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹಾಗೂ ಶಾಸಕ ಡಾ| ಉಮೇಶ ಜಾಧವ ಅವರು ಇಂದಿರಾ ಕ್ಯಾಂಟೀನ್‌ ನಲ್ಲಿ ಉಪಾಹಾರ ಸವಿಯುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ದಂಪತಿ ಸಮಸ್ಯೆ ಆಲಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚವ್ಹಾಣ ಒತ್ತಾಯಿಸಿದರು. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿಂಚೋಳಿ ಶಾಸಕರು ಚಿಂಚೋಳಿ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮಕ್ಕಳ ಮಾರಾಟ ಪ್ರಕರಣ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
 
ನಾನು ಚಂದು ನಾಯಕ ತಾಂಡಾಕ್ಕೆ ಭೇಟಿ ನೀಡಿದಾಗ ಮಕ್ಕಳ ಮಾರಾಟ ಮಾಡಿದ ದಂಪತಿ ಕಡುಬಡತನದ ಸ್ಥಿತಿ ಕಂಡು ಮರುಕಪಟ್ಟೆ. ದಂಪತಿ ಮನೆಯಲ್ಲಿ ಪದೇ ಪದೇ ಹಾವುಗಳು ಬರುತ್ತಿವೆ. ಅವರು ವಾಸವಿದ್ದ ಮನೆಯನ್ನು ಕೆಡವಿದ್ದಾರೆ. ಅವರ ಎರಡೂ ಮಕ್ಕಳು ಹಾವು ಕಚ್ಚಿಸತ್ತಿವೆ. ಈಗ ಅವರು ಸಮುದಾಯ ಭವನದಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬದ ದಯನೀಯ ಸ್ಥಿತಿಗೆ ಶಾಸಕರು ಸ್ಪಂದಿಸಿದ್ದರೆ ಮಕ್ಕಳ ಮಾರಾಟ ಪ್ರಕರಣ ನಡೆಯುತ್ತಿರಲಿಲ್ಲ ಎಂದರು.

ಮಕ್ಕಳ ಮಾರಾಟ ಪ್ರಕರಣ ವರದಿಯಾಗಿ ಒಂದು ವಾರವಾಗಿದೆ. ಆದಾಗ್ಯೂ, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಭೇಟಿ ನೀಡಿಲ್ಲ. ಬದಲಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಶಿರಾ, ಉಪ್ಪಿಟ್ಟು ತಿನ್ನುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು..

ಶಿಶು ಮಾರಾಟ ಮಾಡಿದ ದಂಪತಿಗೆ ವಸತಿ ಯೋಜನೆಯಲ್ಲಿ ಮನೆ ಕಲ್ಪಿಸಬೇಕು. ಇಡೀ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ವಿಶೇಷವಾಗಿ ಚಿಂಚೋಳಿ ತಾಲೂಕಿನ ತಾಂಡಾಗಳ ಜನರು ಉದ್ಯೋಗಕ್ಕಾಗಿ ಹಾಗೂ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಲು ಅವರಿಗೆ ಉದ್ಯೋಗ ನೀಡಬೇಕು. ಗರ್ಭಿಣಿಯರಿಗೆ ಬಾಣಂತಿ ವಸತಿ ನಿಲಯ ಆರಂಭಿಸಬೇಕು. 

ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಹಾಗೂ ನ್ಯಾಯವಾದಿ ಛತ್ರು ರಾಠೊಡ ಮಾತನಾಡಿ, ಚಂದುನಾಯಕ ತಾಂಡಾದಲ್ಲಿನ ಮಕ್ಕಳ ಮಾರಾಟ ಪ್ರಕರಣದ ಕುರಿತು 15 ದಿನಗಳಲ್ಲಿ ತನಿಖೆ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ತುಳಸಿರಾಮ ಪವಾರ, ಬಾಬು ಪವಾರ, ಬಾಳು ರಾಠೊಡ, ದಿನೇಶ ಪವಾರ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next