ಬಳ್ಳಾರಿ: ಹವಂಬಾವಿ ಬಳಿಯ ಎಚ್‌ಎಲ್‌ಸಿ ಉಪಕಾಲುವೆ ದಡದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ ಅಡ್ಡಾದಿಡ್ಡಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಕಾಮಗಾರಿ ಅನುದಾನವನ್ನು ನಿಲ್ಲಿಸುವಂತೆ ಆಗ್ರಹಿಸಿ ಯುವಸೇನಾ ಸೋಷಿಯಲ್ ಆಕ್ಷನ್ ಕ್ಲಬ್ ವತಿಯಿಂದ ಸಹಾಯಕ ಆಯುಕ್ತ ಆಕಾಶ್ ಶಂಕರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಬಳ್ಳಾರಿ ನಗರದ ಹವಂಬಾವಿ ಬಳಿಯ ಉಪ ಕಾಲುವೆ ಎರಡೂ ದಡದ ಮೇಲೆ ನಿರ್ಮಿಸುತ್ತಿರುವ ರಸ್ತೆಯು ಜಲ ಸಂಪನ್ಮೂಲ ನೀರಾವರಿ ಇಲಾಖೆ ಸಂಬಂಧಪಟ್ಟ ಸೇವಾ ರಸ್ತೆಯಾಗಿದೆ. ಈ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 50 ಅಡಿ ಸೇವಾ ರಸ್ತೆ, ಆದರೆ ಲೋಕೋಪಯೋಗಿ ಇಲಾಖೆಯವರು ಒಂದು ಕಡೆ ರಸ್ತೆ ಮತ್ತು ಒಳಚರಂಡಿ ಗುಂಡಿಗಳನ್ನು ಹಾಕಿದ್ದಾರೆ.
ಮತ್ತೊಂದು ಕಡೆ ಗುಂಡಿಗಳನ್ನು ಹಾಕಿ ರಸ್ತೆಯನ್ನು ಹಾಕುತ್ತಿದ್ದಾರೆ. ಈ ರಸ್ತೆ ಹಾಕುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಕೇವಲ ರಸ್ತೆ ಹಾಕುವ ಮುನ್ನ ರಸ್ತೆ ಒತ್ತುವರಿ ಮಾಡಿಕೊಂಡಿರುವ ಮನೆಗಳನ್ನು ತೆರವುಗೊಳಿಸಬೇಕು. ಈ ಕೆಲಸ ತಾವಾಗಿರಬಹುದು, ತುಂಗಾಭದ್ರ ಮಂಡಳಿ (ಟಿ.ಬಿ. ಡ್ಯಾಂ) ಅಧಿಕಾರಿಗಳಾಗಿರಬಹುದು, ಜಲಸಂಪನ್ಮೂಲ ನೀರಾವರಿ ಇಲಾಖೆ ಅಧಿಕಾರಿಗಳಾಗಿರಬಹುದು. ಒಂದು ರಸ್ತೆ ಸುಂದರವಾಗಿ ಕಾಣಬೇಕಾದರೆ ಅಡ್ಡಾದಿಡ್ಡಿಯಾಗಿ ಇದ್ದ ಮನೆಗಳನ್ನು (ಅನಧಿಕೃತವಾಗಿ ಸರ್ಕಾರಿ ಸೇವಾ ರಸ್ತೆಯಲ್ಲಿ ಹಾಕಿರುವ ಮನೆಗಳು) ತೆರವುಗೊಳಿಸಿ, ರಸ್ತೆ ಹಾಕಿದರೆ ಸುಂದರವಾಗಿ ಕಾಣುತ್ತದೆ ಎಂದು ಕ್ಲಬ್ ಮನವಿಯಲ್ಲಿ ತಿಳಿಸಿದೆ.
ಈ ವಿಷಯದಲ್ಲಿ ಉಸ್ತುವಾರಿ ಸಚಿವರು, ನಗರ ಶಾಸಕರು ಮತ್ತು ಆಯಾ ವಾರ್ಡ್‌ಗಳ ಸಂಬಂಧಪಟ್ಟ ಪಾಲಿಕೆ ಸದಸ್ಯರು ತಿಳಿದು ತಿಳಿಯದಂತೆ ಮೌನವಹಿಸಿದ್ದಾರೆ. ಎಲ್ಲ ಮನೆಗಳು ಅಕ್ರಮ, ಅನ ಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳಾಗಿವೆ. ಅಂಥ ಮನೆಗಳನ್ನು ತೆರವುಗೊಳಿಸಿ, ರಸ್ತೆಯನ್ನು ಸುಸಜ್ಜಿತ, ಸುಂದರವಾಗಿ ನಿರ್ಮಿಸಬೇಕು. ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ ಕ್ಲಬ್‌ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಎಸ್. ಕೃಷ್ಣ, ಜಿ.ಎಂ.ಭಾಷ, ಅಲುವೇಲು ಸುರೇಶ್, ಸಲಾವುದ್ದೀನ್, ಜಗನ್ನಾಥ್, ಪಿ.ನಾರಾಯಣ, ಶಿವಾನಂದ, ಕೆ.ವೆಂಕಟೇಶ್, ತೇಜುಪಾಟೀಲ್, ಅಭಿಷೇಕ್ ಇತರರಿದ್ದರು.