ಶಿವಮೊಗ್ಗ: ಭಾರತದ ಆಹಾರ ಸಾರ್ವಭೌಮತ್ವ ಮತ್ತು ದೇಶೀಯ ಮಾರುಕಟ್ಟೆ ರಕ್ಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಹಸು ಸಾಕಿ ಹಾಲು ಕರೆಯುವ, ಕೋಳಿ ಸಾಕುವ ರೈತರನ್ನು ಕಾಪಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಭಾರತದ ಕೃಷಿಯನ್ನು ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸೇರಿಸಿದ ಮೇಲೆ ದೇಶಿಯ ಕೃಷಿ ಉತ್ಪನ್ನ ಮತ್ತು ಅವುಗಳ ಮಾರುಕಟ್ಟೆ ವಿದೇಶಿಯರ ಹಿಡಿತಕ್ಕೆ ಸಿಲುಕಿ ಬೆಲೆ ಕುಸಿತಕ್ಕೆ ಭಾರತದ ರೈತರು ಜರ್ಜರಿತರಾಗಿದ್ದೇವೆ ಎಂದು ಹೇಳಿದರು.
ಕೃಷಿ ಜ್ಞಾನ, ಬಿತ್ತನೆ ಬೀಜ, ಬೆಳೆಗಳ ಬೆಲೆ ಕುಸಿತ ವಿದೇಶಿ ಕಂಪೆನಿಗಳ ಪಾಲಾಗುತ್ತಿವೆ. ಗ್ರಾಮೀಣ ಜನತೆ ದುಡಿದು ಸಂಪಾದಿಸಿ ಜೀವನ ನಡೆಸಲು ಆತಂಕ ಪಡುವಂತಾಗಿದೆ.ಭಾರತ ಸರ್ಕಾರದ ಆಮದು ಮತ್ತು ರಫ್ತು ನೀತಿಗಳು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಜಾರುತ್ತಿವೆ. ಇದರಿಂದ ಭಾರತವನ್ನು ಲಾಭಕೋರರು ಮಾರು ಕಟ್ಟೆಯನ್ನಾಗಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಭಾರತದ ಮಹಿಳೆಯರು ಪಶುಪಾಲನೆ ಮಾಡಿ ಹಾಲು ಉತ್ಪಾದನೆ, ಕುಕ್ಕುಟೋದ್ಯಮ ಕೃಷಿಯ ಭಾಗವಾಗಿಸಿಕೊಂಡಿದ್ದಾರೆ. ಇವುಗಳ ರಕ್ಷಣೆ ಆಗಬೇಕಿದೆ ಎಂದರು.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ಕೊಟ್ಟಿದ್ದು ಭಾರತದ ರೈತರಲ್ಲಿ ಅನೇಕ ಆಂತಕ ಮತ್ತು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭಾರತದ ಕೃಷಿಯು ಗ್ರಾಮೀಣ ಜನರ ಉದ್ಯೋಗ ಭದ್ರತೆ ಮತ್ತು ಆಹಾರ ಭದ್ರತೆ ಕಲ್ಪಿಸುತ್ತಿದೆ. ಇವುಗಳ ಮೇಲೆ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಕಣ್ಣಿಟ್ಟಿವೆ. ಭಾರತದ ಕೃಷಿ ಮತ್ತು ಜ್ಞಾನ ಈಗಿನ ಯುವಜನಾಂಗಕ್ಕೆ ಹೊಸ ಭರವಸೆ ಹುಟ್ಟುಹಾಕುತ್ತಿವೆ. ಇವುಗಳ ರಕ್ಷಣೆ ಅಗತ್ಯವಾಗಿದೆ ಎಂದರು.
ಅಮೆರಿಕ ಅಧ್ಯಕ್ಷರ ಭಾರತ ಭೇಟಿ ವೇಳೆ ಒಪ್ಪಂದ ಮಾಡಿಕೊಳ್ಳುವಾಗ ಅಮೆರಿಕ ಮತ್ತು ಇತರೆ ರಾಷ್ಟ್ರಗಳಿಂದ ಮುಕ್ತ ಸುಂಕ ರಹಿತ ಆಮದಿಗೆ ಭಾರತ ಒಪ್ಪಬಾರದು. ಭಾರತದ ರೈತರನ್ನು ಕಾಪಾಡುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.