ಮಾಗಡಿ: ಮಾಯಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮಾಯಸಂದ್ರ, ವಿರೂಪಾಪುರ, ಲಕ್ಕೇನಹಳ್ಳಿ ಬೆಟ್ಟೇಗೌಡನಪಾಳ್ಯದ ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲೂಕಿನ ತಿಪ್ಪಸಂದ್ರ ಹೋಬಳಿ ಮಾಯಸಂದ್ರ ಗ್ರಾಮದ ಸರ್ವೇ 44/ಪಿ1 ನಂಬರ್ ನ ಅಮೃತ ಮಹಲ್ ಕಾವಲ್ನಲ್ಲಿ |23 ಎಕರೆ 24 ಗುಂಟೆ ಸರ್ಕಾರಿ ಜಮೀನಿದೆ. ಸದರಿ ನಂಬರ್ ಪೈಕಿ 2.10 ಎಕರೆ ಜಮೀನನ್ನು ಸರ್ಕಾರ ಜಯಲಕ್ಷ್ಮಮ್ಮ ಕೋಂ ಕೆಂಪಯ್ಯ ಎಂಬುವರ ಹೆಸರಿಗೆ ಮಂಜೂರು ಮಾಡಿದೆ. ಉಳಿಕೆ ಜಮೀನು ಸರ್ಕಾರಿ ಜಮೀನು ಆಗಿದೆ. ಆದರೂ ಸಹ ಕೆಂಪಯ್ಯ ಎಂಬುವರು ಸದರಿ ಸರ್ವೇ ನಂಬರ್‌ನ ಎಲ್ಲಾ ಭೂಮಿಯೂ ನನ್ನದೇ ಎಂದು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒತ್ತುವರಿ ಜಾಗಕ್ಕೆ ಬೇಲಿ: ಜಿಪಂ ಮಾಜಿ ಅಧ್ಯಕ್ಷ ಎಂ.ಕೆ. ಧನಂಜಯ ಮಾತನಾಡಿ, ಸರ್ಕಾರಿ ಜಮೀನಿನಲ್ಲಿ ಈ ಭಾಗದ ರೈತರು ತಮ್ಮ ದನಕರುಗಳನ್ನು ಮೇಯಿಸಲು ಹುಲ್ಲುಗಾವಲು ಮಾಡಿಕೊಂಡಿದ್ದರು. ಆದರೀಗ ಕೆಂಪಯ್ಯ ಎಂಬುವರು ಯಾವ ರೈತರಿಗೂ ದನಕರುಗಳನ್ನು ಮೇಯಿಸಲು ಬಿಡದೇ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾರೆ. ಮುಂದಿನ ಜಮೀನಿನ ರೈತರು ತಮ್ಮ ಹೊಲಬಿತ್ತನೆ ಮಾಡಲು ಹೋಗಲಾಗುತ್ತಿಲ್ಲ. ದನಕರುಗಳಿಗೂ ಮೇವಿಲ್ಲ. ರೆವಿನ್ಯೂ ಅಧಿಕಾರಿಗಳ ಕಮ್ಮಕ್ಕಿನಿಂದ ಕೆಂಪಯ್ಯ ಮೆರೆಯುತ್ತಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ಜಮೀನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ದನಮೇಯಿಸಲು ಬಿಟ್ಟುಕೊಡಿ: ಹೊನ್ನಪುರ ಶಿವಪ್ರಸಾದ್ ಮಾತನಾಡಿ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ತಾಲೂಕು ಕಚೇರಿ ಮುಂದೆ ಜಮಾಯಿಸಿ, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೆಂಪಯ್ಯ ಅವರನ್ನು ಎತ್ತಂಗಡಿ ಮಾಡಿಸಬೇಕು ತಹಶೀಲ್ದಾರ್‌ಗೆ ಮನವಿ ಮಾಡಿದ್ದೇವೆ. ಕೂಡಲೇ ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡು ಗ್ರಾಮಸ್ಥರಿಗೆ ದನಮೇಯಿಸಲು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಟಿ. ಜಯಣ್ಣ ಮತ್ತು ಶಿರಸ್ತೇದಾರ್ ಜಗದೀಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಖಂಡರಾದ ಮರೂರು ಮರಿಗೌಡ, ರಂಗಸ್ವಾಮಿ, ಸುದರ್ಶನ್, ವಿಎಸ್‌ಎಸ್‌ಎನ್ ನಿರ್ದೇಶಕ ಮೂರ್ತಿ, ರವಿಕುಮಾರ್, ಶಿವಣ್ಣ, ಶರ್ಮ ಹಾಜರಿದ್ದರು.