Advertisement

ಶುದ್ಧ ನೀರಿನ ಘಟಕ ದುರಸ್ತಿಗೆ ಒತ್ತಾಯ

04:57 PM Dec 09, 2019 | Team Udayavani |

ಮದ್ದೂರು: ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಹರಳಕೆರೆ ಗ್ರಾಮಸ್ಥರು ಘಟಕದ ಎದುರು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕೊಪ್ಪ ಹೋಬಳಿಯ ಹರಳಕೆರೆ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಘಟಕ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ಎರಡು ವರ್ಷಗಳ ಹಿಂದೆ 10 ಲಕ್ಷ ರೂ. ನಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಅವೈಜ್ಞಾನಿಕವಾಗಿದೆ. ಕಾಮಗಾರಿ ಮುಗಿದ ಒಂದು ತಿಂಗಳಲ್ಲೇ ಕೆಟ್ಟು, ಹಲವು ದಿನಗಳೇ ಕಳೆದಿದ್ದರೂ ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.

ತಗ್ಗಹಳ್ಳಿ ಗ್ರಾಪಂ ವ್ಯಾಪ್ತಿಯ ಹರಳಕೆರೆ ಸೇರಿಇನ್ನಿತರೆ ಗ್ರಾಮಗಳಲ್ಲಿನ ಘಟಕಗಳೂ ಕೆಟ್ಟುನಿಂತಿದ್ದು ಕೂಡಲೇ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ದುರಸ್ತಿಗೊಳಿಸಿ, ಸಮರ್ಪಕ ನಿರ್ವಹಣೆ ಮಾಡಲು ಮುಂದಾಗಬೇಕೆಂದರು.

ತಾಲೂಕಿನ ಮೂಡ್ಯ, ಚೆನ್ನಮ್ಮನಕೊಪ್ಪಲು, ತರಿಕೆರೆ ಹಾಗೂ ಹರಳಕೆರೆ ಗ್ರಾಮಸ್ಥರಿಗೆ ಅನುಕೂಲವಾಗ  ಬೇಕಾಗಿದ್ದ ಘಟಕವು ಇಂದು ಹಾಳುಕೊಂಪೆಯಾಗಿ ಮಾರ್ಪಟ್ಟಿದ್ದು, ಈ ವ್ಯಾಪ್ತಿಯ ಜನರು ದೂರದ ಕೊಪ್ಪ ಗ್ರಾಮಕ್ಕೆ ತೆರಳಿ ನೀರು ತರಬೇಕಾದ ಸ್ಥಿತಿ ಬಂದೊದಗಿದೆ.

Advertisement

ಹರಳಕೆರೆ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫ‌ಲವಾಗಿದೆ. ಒಂದುವರೆ ಸಾವಿರ ಜನಸಂಖ್ಯೆಯಿರುವ ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಒಂದು ವಾರದೊಳಗಾಗಿ ಘಟಕದ ದುರಸ್ತಿಗೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮುಂದಾಗದಿದ್ದಲ್ಲಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆ ವೇಳೆ ಗ್ರಾಮದ ಮುಖಂಡರಾದ ರಾಮೇಗೌಡ, ಮಂಜು, ಕೀರ್ತಿ, ಚನ್ನಪ್ಪ, ಚಿಕ್ಕಣ್ಣ, ಉಮಾಶಂಕರ್‌, ರಾಮಣ್ಣ, ತುಳಸಿಕೃಷ್ಣ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next