ಚಿತ್ರದುರ್ಗ: ಸಾರಿಗೆ ವಂಚಿತ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಘಟಕದ ಪದಾಧಿಕಾರಿಗಳು ಡಿಪೋ ವ್ಯವಸ್ಥಾಪಕ ನಾಗರಾಜ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಾರಿಗೆ ಸಂಸ್ಥೆಯ ಚಿತ್ರದುರ್ಗ ಘಟಕದಿಂದ ಗ್ರಾಮೀಣ ಭಾಗಕ್ಕೆ ಕನಿಷ್ಠ 2 ಬಸ್‌ಗಳನ್ನು ಓಡಿಸಬೇಕು. ಬೆಳಗ್ಗೆ 7 ಗಂಟೆಗೆ ತೋಪರಮಾಳಿಗೆ ಎಣ್ಣೆಗೆರೆ, ಜೋಡಿಚಿಕ್ಕೇನಹಳ್ಳಿ, ಪಲ್ಲವಗೆರೆ, ಸಜ್ಜನಕೆರೆ, ಕಳ್ಳಿರೊಪ್ಪ, ಸೊಂಡೇಕೆರೆ, ಚಿಕ್ಕಮಧುರೆ, ಹಿರೇಮಧುರೆ, ಚಿಗತನಹಳ್ಳಿ, ಗಂಜಿಗುಂಟೆ, ಕಮ್ಮತ್‌ಮರಿಕುಂಟೆ ಮಾರ್ಗವಾಗಿ ಚಳ್ಳಕೆರೆಗೆ ಬಸ್ ಓಡಿಸಬೇಕು ಮತ್ತು ಅದೇ ಮಾರ್ಗದಲ್ಲಿ ವಾಪಸ್ ಚಿತ್ರದುರ್ಗಕ್ಕೆ ಆಗಮಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಈ ಗ್ರಾಮಗಳು ಬಸ್ ಸಂಚಾರದಿಂದ ವಂಚಿತವಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ರೋಗಿಗಳಿಗೆ ತೊಂದರೆಯಾಗುತ್ತಿದೆ ಆದ್ದರಿಂದ
ಕೂಡಲೇ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಡಿಪೋ ವ್ಯವಸ್ಥಾಪಕ ನಾಗರಾಜ ಮಾತನಾಡಿ, ಒಂದು ತಿಂಗಳ ಕಾಲಾವಕಾಶ ನೀಡಿ. ಅಷ್ಟರೊಳಗೆ ನೀವು ತಿಳಿಸಿದ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ಟಿ. ನುಲೇನೂರು ಎಂ. ಶಂಕರಪ್ಪ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು, ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಖಜಾಂಚಿ ಸಿ.ಆರ್. ತಿಮ್ಮಣ್ಣ, ದಯಾನಂದ ಚಳ್ಳಕೆರೆ, ಹಸಿರುಸೇನೆ ಸಂಚಾಲಕ ಧನಂಜಯ, ಸಜ್ಜನಕೆರೆ ರೇವಣ್ಣ, ಆರ್. ತಿಪ್ಪೇಸ್ವಾಮಿ, ಹೇಮಣ್ಣ ಪಲ್ಲವಗೆರೆ, ಜೆ.ಎನ್. ಕೋಟೆ ಶಿರಗೆನಿಂಗಪ್ಪ, ಗಿರೀಶ್, ಓಂಕಾರಪ್ಪ ಇದ್ದರು.