ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು, ಇವೆರಡೂ ಇಲಾಖೆ ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು ಶೇ.5 ಹತೋಟಿಗೆ ಬಂದು ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗುತ್ತದೆ ಎಂದು ರೈತ ಸಂಘದ ಮುಖಂಡರು ಎಸಿಬಿಗೆ ದೂರು ನೀಡಿದರು.
ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ರೈತ ಸಂಘದಿಂದ ಎಸಿಬಿ ಅಧಿಕಾರಿಗಳಿಗೆ ಮನವಿ ನೀಡಿ ಕಂದಾಯ ಹಾಗೂ ಸರ್ವೇ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಗ್ರಹಿಸಬೇಕು, ಇಲ್ಲವಾದಲ್ಲಿ ಲಂಚ ಕೊಡಬೇಡಿ ಎನ್ನುವುದು ವೇದಿಕೆಗಳಿಗೆ ಸೀಮಿತವಾಗಿ ಜನರು ಪ್ರತಿನಿತ್ಯ ನರಕ ಅನುಭವಿಸಬೇಕಾಗುತ್ತದೆಂದು ಎಂದು ದೂರಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕಂದಾಯ ಮತ್ತು ಸರ್ವೇ ಇಲಾಖೆಗಳನ್ನು ಸ್ವಂತ ಆಸ್ತಿಯಂತೆ ಮಾಡಿಕೊಂಡಿ ರುವ ಕೆಲವು ಅಧಿಕಾರಿಗಳು ರೈತರನ್ನು ತಿಂಗಳಾನುಗಟ್ಟಲೇ ಅಲೆದಾಡಿಸಿ, ರೈತರನ್ನು ಪ್ರತಿ ಹೆಜ್ಜೆಗೂ ಲಂಚಕ್ಕಾಗಿ ಶೋಷಿಸಲು ಆದೇಶ ಹೊರಡಿಸಿ ಈ ಎರಡು ಇಲಾಖೆಯನ್ನು ಸಂಪೂರ್ಣ ಭೂಗಳ್ಳರ ಆಸ್ತಿಯಂತೆ ಮಾಡಲು ಹೊರಟಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಅಕ್ರಮ ತನಿಖೆ ಕೈಗೊಂಡು ಶಿಕ್ಷೆಯಾದಾಗ ಮಾತ್ರ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕಚೇರಿಗಳು ಹಿಟ್ಲರ್‌ನ ಸಾಮ್ರಾಜ್ಯದಂತೆ ಲಂಚವಿಲ್ಲದೆ ಒಂದು ಅರ್ಜಿಯೂ ಕದಲುವುದಿಲ್ಲ, ವರ್ಷಾನೂಗಟ್ಟಲೆ ಕಚೇರಿಗಳಿಗೆ ಅಲೆದಾಡುವಂತ ಸ್ಥಿತಿ ಇದ್ದರೂ ಕೆಲವು ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತುಟಿ ಕೂಡ ಬಿಚ್ಚುವುದಿಲ್ಲ. ಇನ್ನು ಜಿಲ್ಲೆಗೆ ಬರುವ ಯಾವ ಅಧಿಕಾರಿಯೂ ತಾವು ಸರ್ಕಾರದ ಮಟ್ಟದಲ್ಲಿ ಲಕ್ಷಗಳ ಲೆಕ್ಕದಲ್ಲಿ ರಾಜಕಾರಣಿಗಳಿಗೆ ಹಣ ಕೊಟ್ಟು ಬಂದಿದ್ದೇವೆ. ನಾವು ಉಚಿತ ಕೆಲಸ ಮಾಡಲು ರೆಡಿ ಇಲ್ಲವೆಂಬ ಮನೋಭಾವ ಹೊಂದಿರುವ ಅಧಿಕಾರಿ ವರ್ಗದ ಶೇ.50 ಕಚೇರಿಗಳಲ್ಲಿ ತುಂಬಿದ್ದಾರೆ ಎಂದು ಆರೋಪಿಸಿದರು.
ಅಲೆದು ಅಲೆದು ಬೇಸತ್ತ ರೈತ ಅಧಿಕಾರಿ ಮೇಲೆ ಕೈ ಮಾಡಿದರೆ ಸರ್ಕಾರಿ ನೌಕರರ ಸಂಘ ಸತ್ಯ ಹರಿಚಂದ್ರರಂತೆ ಬೀದಿಗಿಳಿದು ಅಬ್ಬರಿಸುತ್ತಾರೆ. ದೊಡ್ಡಮಟ್ಟದ ಲಂಚ ಪಡೆಯುವ ಅಧಿಕಾರಿಗಳು ಸಿಗದೆ ಕೆಳಮಟ್ಟದ ಅಧಿಕಾರಿಗಳು ಲಂಚ ತೆಗೆದುಕೊಂಡು ಅಮಾನತ್ತಾಗಿ ಮತ್ತೆ ಯಥಾಸ್ಥಿತಿ ಕಾರ್ಯಾರಂಭಕ್ಕೆ ಇಳಿದು ಜನರ ಶೋಷಣೆ ನಿರಂತರವಾಗಿ ಮಾಡುತ್ತಾರೆ. ಇದನ್ನು ಸಂಪೂರ್ಣವಾಗಿ ತೊಳೆಯಬೇಕಾದರೆ ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಇಚ್ಛಾಶಕ್ತಿ ಬೇಕಾಗಿದೆ ಎಂದು ದೂರಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ನಾಗೇಶ್, ವೆಂಕಟೇಶ್, ತಿಮ್ಮಣ್ಣ, ತೆರ್ನಹಳ್ಳಿ ಆಂಜಿನಪ್ಪ, ಈಕಂಬಳ್ಳಿ ಮಂಜುನಾಥ್ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.