ಮುಳಬಾಗಿಲು: ವಿವೇಕಾನಂದ ನಗರದ ಕಾಲೋನಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಸಮುದಾಯ ಭವನ, ಸ್ಮಶಾನಕ್ಕೆ ಜಮೀನು ಮೀಸಲು ಸೇರಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮತ್ತು ಪರಶುರಾಮ ಸೇನೆ ಕಾರ್ಯಕರ್ತರು ಅಬಕಾರಿ ಸಚಿವ ಎಚ್.ನಾಗೇಶ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮಸೇನೆ ಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್, ನಗರದ ಹೊರವಲಯದ ವೀರಭದ್ರ ನಗರದ ಸರ್ವೆ ನಂಬರ್ 85ರಲ್ಲಿ 48 ನಿರಾಶ್ರಿತರಿಗೆ ನಿವೇಶನ ನೀಡಲಾಗಿದೆ. ಆದರೆ, ಮೂಲ ಸೌಕರ್ಯ ಒದಗಿಸಿಲ್ಲ ಎಂದರು.
ಲೇಔಟ್ ನೀಲನಕ್ಷೆಯಂತೆ ರಸ್ತೆ ಸಂಪರ್ಕ ಒದಗಿಸಿಕೊಡಬೇಕು, ಗುಣ ಮಟ್ಟದ ಕಾಮಗಾರಿ ನಡೆಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ಹಕ್ಕುಪತ್ರ ಗಳನ್ನು ನೀಡುವ ವೇಳೆ ಕೆಲವು ಹೆಸರುಗಳು ತಪ್ಪಾಗಿ ಬಂದಿದ್ದು, ಅವುಗಳನ್ನು ಸರಿಪಡಿಸಿ ತಿದ್ದುಪಡಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ದಸಂಸ (ಸಂಯೋಜಕ) ಜಿಲ್ಲಾ ಸಂಘಟನಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್ ಮಾತನಾಡಿ, ನಿವೇಶನದ ಪಕ್ಕದಲ್ಲಿ ಸರ್ಕಾರಿ ಜಮೀನನನ್ನು ಸ್ಮಶಾನಕ್ಕೆ ನೀಡುವಂತೆ ಮನವಿ ಮಾಡಿದರು.
ಗುಜ್ಜಮಾರಂಡಹಳ್ಳಿ ಜಗದೀಶ್, ಪರಶುರಾಮ ಸೇನೆಯ ಗಣೇಶಪಾಳ್ಯ ಕಿಟ್ಟಿ, ಮಧು, ಬಾಚಮಾಕನಹಳ್ಳಿ ವಿಜಿ, ಹರೀಶ್, ಬಲ್ಲ ಸೋಮ, ಪೂಲ್ ಅಶ್ವತ್ಥ್, ದಸಂಸ ಜಿಲ್ಲಾ ಸಮಿತಿಯ ಕೆ.ಆರ್. ಮುನಿಯಪ್ಪ, ಎಚ್.ವೆಂಕಟರಾಮಪ್ಪ, ತಾಲೂಕು ಸಂಚಾಲಕ ಎನ್. ವೆಂಕಟರಾಮಪ್ಪ, ಸಲಹಾ ಸಮಿತಿಯ ಎಂ.ಸುಬ್ರಮಣ್ಯಂ, ತಾಲೂಕು ಸಂಘಟನಾ ಸಂಚಾಲಕ ಬಿ.ಎಸ್. ಮುನಿಶಾಮಿ, ಎಂ.ರಾಜಪ್ಪ, ಜಿ.ಗಂಗಾಧರ್, ಕುಪ್ಪಣ್ಣ, ಟಿ.ಎಂ.ಕೃಷ್ಣಪ್ಪ, ಎಸ್.ರಾಜಣ್ಣ, ಎನ್.ವೆಂಕಟೇಶ್, ಬಿ.ಆರ್.ಮಂಜು, ಮುನಿರತ್ನಂ ಇದ್ದರು.