Advertisement

ಕನಿಷ್ಟ ಮಾಸಿಕ ಗೌರವಧನ ನೀಡಲು ಒತ್ತಾಯ

02:15 PM Dec 23, 2019 | Suhan S |

ಶಿರಸಿ: ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದ ಸೇವಾದಳದಲ್ಲಿ ಜಿಲ್ಲಾಮಟ್ಟದ ಮುಖಂಡರ ಸಭೆ ನಡೆಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ, ಆರ್‌ಸಿ ಎಚ್‌ ಪೋರ್ಟಲ್‌ ನಿಂದಾಗಿ ಕಳೆದ 16 ತಿಂಗಳಿನಿಂದ ಮಾಡಿದಷ್ಟು ವೇತನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಆಶಾಗಳಿಗೆ ಸಾವಿರಾರು ರೂಪಾಯಿಗಳ ಆರ್ಥಿಕ ನಷ್ಟವಾಗಿದೆ. ಅಲ್ಲದೆ ಬಾರದ ವೇತನ, ಎಡೆಬಿಡದ ಸರ್ವೆಗಳು, ಕಫ ತರಲೇಬೇಕೆಂಬ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಂದ ಆಶಾ ಕಾರ್ಯಕರ್ತೆಯರು ರೋಸಿಹೋಗಿದ್ದಾರೆ. ಈ ಬಗ್ಗೆ ಆರೋಗ್ಯ ಮಂತ್ರಿಗಳು, ಅಧಿಕಾರಿಗಳನ್ನು ರಾಜ್ಯಮಟ್ಟದಲ್ಲಿ ಭೇಟಿಯಾಗಿದ್ದು, ನೀಡಿದ ಭರವಸೆಗಳು ಹಾಗೆಯೇ ಉಳಿದಿವೆ. ಆದ್ದರಿಂದ ಕೇಂದ್ರ ರಾಜ್ಯ ಸರ್ಕಾರದ ಪ್ರೋತ್ಸಾಹಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಠ ಮಾಸಿಕ ಗೌರವಧನ 12000 ನೀಡಬೇಕು ಎಂದರು.

ಆಶಾ ಸಾಫ್ಟ್‌ ಅಥವಾ ಆರ್‌ಸಿಎಚ್‌ ಪೋರ್ಟಲ್‌ಗೆ ಪ್ರೋತ್ಸಾಹ ಧನದ ಜೋಡಣೆ ರದ್ದುಪಡಿಸಬೇಕು. ಕಳೆದ 16 ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹಧನವನ್ನು ಪ್ರತಿ ಆಶಾಗೆ 1000 ಜನಸಂಖ್ಯೆಗೆ ಮಾಸಿಕ 3000 ರೂ. ನಿಗದಿ ಮಾಡಬೇಕು ಎಂದರು. ಈಗಾಗಲೇ ಭರವಸೆ ನೀಡಿದಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆಶಾಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ ಮತ್ತು ಮರಣ ಹೊಂದಿದಲ್ಲಿ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪ್ರತಿ ಸರ್ವೇಗೆ ದಿನದ ಭತ್ತೆ 300 ನಿಗದಿಗೊಳಿಸಿ ಆ ದಿನವೇ ಕೊಡಬೇಕು. ಆಶಾ ಸುಗಮಗಾರರಿಗೆ 12,000 ಮಾಸಿಕ ವೇತನ ನಿಗದಿ ಮಾಡಿ ಟಿಎ ನಿಗದಿ ಮಾಡಿ. ಇತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಬರುವ ಜನವರಿ 3ರಿಂದ ರಾಜ್ಯಮಟ್ಟದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲ ತಾಲೂಕುಗಳ ಸಮಸ್ತ ಆಶಾ ಕಾರ್ಯಕರ್ತೆಯರು ಮುನ್ನುಗ್ಗಬೇಕಿದೆ. ದುಡಿತಕ್ಕೆ ತಕ್ಕ ಪ್ರತಿಫಲ ಪಡೆಯಲು ರಾಜಿರಹಿತ, ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಸಭೆ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ಪದ್ಮ ಚಲವಾದಿ ವಹಿಸಿದ್ದರು. ಅನ್ನಪೂರ್ಣ, ಕವಿತಾ, ಸುವರ್ಣ, ಸುಷ್ಮಾ, ಕಸ್ತೂರಿ, ಜಯ, ಜಾನಕಿ ಮುಂತಾದ ತಾಲೂಕು ಮುಖಂಡರು ವೇದಿಕೆಯಲ್ಲಿದ್ದರು. ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next