ಜೇವರ್ಗಿ: ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಸೋಮವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಸರಕಾರಿ ಪ್ರಥಮ ದಜೇì ಕಾಲೇಜಿನಿಂದ ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳ ಮುಖಂಡ ವಕೀಲ ರವಿಚಂದ್ರ ಗುತ್ತೇದಾರ ಮಾತನಾಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಕಳೆದ 24 ದಿನಗಳಿಂದ ಸೇವಾ ಭದ್ರತೆ ಅಥವಾ ಖಾಯಂ ಭಡ್ತಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದಾರೆ. ಇದರಿಂದ ಕಳೆದ ಹಲವಾರು ದಿನಗಳಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಅತಿಥಿ ಉಪನ್ಯಾಸಕರ ಹಾಗೂ ಸರ್ಕಾರದ ಮಧ್ಯೆ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ ಎಂದರು.
ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ವೀರೇಶ್ ಗುತ್ತೇದಾರ, ಯಾಸೀನ್ ಇನಾಮದಾರ, ಮುದಾಸೀರ್ ಪಟೇಲ, ಅಮರ, ಸಲ್ಮಾ ತಸ್ಲಿಂ, ಅನಿಲಕುಮಾರ, ಕರಣ, ಮಲ್ಲಿಕಾರ್ಜುನ, ಆನಂದ ಸಾಗರ, ಜಯಪ್ರಕಾಶ ಇತರರಿದ್ದರು.