ದಕ್ಷಿಣ ಕನ್ನಡದ ಪುತ್ತೂರಿನಿಂದ ವಾಹನದಲ್ಲಿ ಹೊರಟ ನಾವು ಅರ್ಧ ಗಂಟೆ ಪ್ರಯಾಣಿಸಿ ತಲಪಿದ್ದು ಬಡಗನ್ನೂರಿನ ಪಟ್ಟೆಗೆ. ನಮಗಾಗಿ ಕಾದಿದ್ದ ಕೃಷಿಕ ಶಿವಪ್ರಸಾದ ಪಟ್ಟೆ ನೇರವಾಗಿ ನಮ್ಮನ್ನು ತಮ್ಮ ಜಮೀನಿಗೆ ಕರೆದೊಯ್ದರು.
Advertisement
ಭತ್ತದ ಗದ್ದೆಯನ್ನು ಹಾದು ಹೋಗುತ್ತಿದ್ದಂತೆ, ಈಗಲೂ ಮಳೆಗಾಲದಲ್ಲಿ ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುತ್ತೇನೆ. ನಾನು ಬೆಳೆಯುವುದು ಜ್ಯೋತಿ ಮತ್ತು ಕಜೆ ಜಯ ತಳಿ. ಈ ಪ್ರದೇಶದಲ್ಲಿ ಶ್ರೀಪದ್ಧತಿಯಲ್ಲಿ ನಾನೇ ಮೊದಲು ಭತ್ತ ಬೆಳೆದಿದ್ದು. ಭತ್ತದ ಬೆಳೆಗೆ ಕೀಟಗಳ ಉಪದ್ರವ ಆದಾಗ, ಯಾವುದೇ ವಿಷರಾಸಾಯನಿಕವನ್ನು ಸ್ಪ್ರೆ ಮಾಡೋದಿಲ್ಲ. ಕಾಸರಕನ ಎಲೆಯ ಕಷಾಯ ಮತ್ತು ಗೋಮೂತ್ರ ಸ್ಪ್ರೆà ಮಾಡಿ ನಿಯಂತ್ರಿಸುತ್ತೇನೆ. ನಾನು ಭತ್ತ ಬೆಳೆಯುವುದು ಸಾವಯವ ಪದ್ಧತಿಯಲ್ಲಿ. ಇದಕ್ಕೆ ಪ್ರೇರಣೆ ಹಿರಿಯ ಸಾವಯವ ಕೃಷಿಕ ಎಲ…. ನಾರಾಯಣ ರೆಡ್ಡಿಯವರು ಎಂದು ತಮ್ಮ ಭತ್ತದ ಕೃಷಿಯ ವಿವರ ನೀಡಿದರು ಶಿವಪ್ರಸಾದ ಪಟ್ಟೆ.
Related Articles
Advertisement
ತೆಂಗು, ಅಡಿಕೆ, ಕರಿಮೆಣಸು ಇವನ್ನೇ ನಂಬಿ ಕುಳಿತರಾಗದು ಎಂದು ಶಿವಪ್ರಸಾದರಿಗೆ ದಶಕದ ಹಿಂದೆಯೇ ಅರ್ಥವಾಗಿತ್ತು. ಅದಕ್ಕಾಗಿ, ತಮ್ಮ ತೋಟದಲ್ಲಿ ವಿದೇಶೀ ಹಣ್ಣುಗಳ ಗಿಡಗಳನ್ನು ನೆಡಲು ಶುರುವಿಟ್ಟರು. ಈಗ ರಾಂಬುಟಾನ್ ಮತ್ತು ಪುಲಾಸನ್ ಗಿಡಗಳು ಚೆನ್ನಾಗಿ ಬೆಳೆದಿವೆ. ಮೊದಲು ನೆಟ್ಟ ರಾಂಬುಟಾನ್ ಗಿಡ ಈಗ ದೊಡ್ಡ ಮರವಾಗಿದ್ದು, ವರುಷಕ್ಕೆ ಒಂದು ಕ್ವಿಂಟಾಲ… ಹಣ್ಣಿನ ಇಳುವರಿ ನೀಡುತ್ತಿದೆ. ಅವಲ್ಲದೆ, ಅವರ ತೋಟದಲ್ಲಿ ಲಕ್ಷ್ಮಣಫಲದ ಗಿಡಗಳೂ ಹಣ್ಣು ಬಿಡುತ್ತಿವೆ. ಈ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಒಂದು ಕಿಲೋಕ್ಕೆ ರೂ.300ಕ್ಕಿಂತ ಅಧಿಕ ಬೆಲೆಯಿದೆ. ಹಾಗಾಗಿ ಇವು ಕೃಷಿಕರಿಗೆ ಉತ್ತಮ ಪೂರಕ ಆದಾಯ ಒದಗಿಸುತ್ತವೆ ಎಂಬುದು ಶಿವಪ್ರಸಾದರ ಅಭಿಪ್ರಾಯ.
ಅಲ್ಲಿಂದ ಹೊರಟು, ಹತ್ತಿರದಲ್ಲಿರುವ ಅವರ ಅಣ್ಣ ವೇಣುಗೋಪಾಲ ಪಟ್ಟೆಯವರ ತೋಟವನ್ನು ನೋಡಿದ್ದಾಯಿತಿ. ಅಲ್ಲಿದ್ದ ಮುಖ್ಯ ಬೆಳೆ ರಬ್ಬರ್. ಇವರ ರಬ್ಬರ್ ತೋಟಕ್ಕೆ ಬಿದ್ದ ಒಂದು ಹನಿ ಮಳೆನೀರೂ ಹೊರಕ್ಕೆ ಹರಿದು ಹೋಗಲು ಬಿಡುವುದಿಲ್ಲ ಅವರು ಮಾಡಿಸಿರುವ ಆಳವಾದ ಇಂಗುಗುಂಡಿಗಳು ಮತ್ತು ಸಮತಲ ಕಂದಕಗಳು.
ಪಕ್ಕದಲ್ಲಿರುವ ಹಳೆಯ ಅಡಿಕೆ ತೋಟಕ್ಕೆ ಹೋಗುತ್ತಿದ್ದಂತೆ, ನಮ್ಮ ಗಮನ ಸೆಳೆದದ್ದು ಅಲ್ಲಿರುವ ಸುಮಾರು ಒಂದು ಎಕರೆ ವಿಸ್ತೀರ್ಣದ ಕೆರೆ. ಅಂತಹ ವಿಸ್ತಾರವಾದ ಹಾಗೂ ಆಳವಾದ ಕೆರೆಗಳು ಈಗ ಅಪರೂಪ. ಅದು ಇವರ ತಂದೆಯವರು ಮಾಡಿಸಿದ ಕೆರೆ. ಅದರಲ್ಲಿ ತುಂಬಿ ನಿಂತಿರುವ ನೀರಿನಿಂದಾಗಿ ಇವರ ಇಡೀ ತೋಟಕ್ಕೆ ಬಿರುಬೇಸಗೆಯಲ್ಲಿಯೂ ನೀರಿನ ಆತಂಕವಿಲ್ಲ. ಆದರೂ ಇವರು ಮಳೆನೀರ ಕೊಯ್ಲು ಮಾಡುತ್ತಿರುವುದು ಅನುಕರಣೀಯ. ಆ ಕೆರೆಯ ಪಕ್ಕದಲ್ಲಿಯೇ ಇರುವ ನಾಗಬನಕ್ಕೆ ನಮ್ಮನ್ನು ಕರೆದೊಯ್ದರು ವೇಣುಗೋಪಾಲ ಪಟ್ಟೆ. ಅಲ್ಲಿರುವ ಪುರಾತನ ಮರಗಳನ್ನು ದಾಟುವಾಗ ಕಾಡು ಹೊಕ್ಕ ಅನುಭವ. ಅಲ್ಲಿ ವರುಷಕ್ಕೊಮ್ಮೆ ನಡೆಯುವ ಬನದೂಟದಲ್ಲಿ ಹಳ್ಳಿಯವರೆಲ್ಲ ಭಾಗವಹಿಸುತ್ತಾರೆಂದು ತಿಳಿಸಿದರು.
ಅನಂತರ, ಮನೆಯ ಅಂಗಳದ ಮೂಲೆಯ ಷೆಡ್ಡಿನಲ್ಲಿರುವ ರಬ್ಬರ್ ಹಾಳೆ ಮಾಡುವ ನೂತನ ವಿನ್ಯಾಸದ ಮೆಷೀನಿನ ಮತ್ತು ರಬ್ಬರ್ ಡ್ರೈಯರಿನ ಕಾರ್ಯವಿಧಾನ ವಿವರಿಸಿದರು ವೇಣುಗೋಪಾಲ ಪಟ್ಟೆ. ಈ ಯಂತ್ರಗಳಿಂದಾಗಿ ರಬ್ಬರ್ ಹಾಳೆ ಮಾಡುವ ಕೆಲಸ ಸುಲಭವಾಗಿದೆ. ಶಿವಪ್ರಸಾದ್ ಪಟ್ಟೆ ಮತ್ತು ವೇಣುಗೋಪಾಲ ಪಟ್ಟೆ ಇವರಿಬ್ಬರ ತೋಟಗಳಿಂದ ಸಮರ್ಥ ಕೃಷಿ ನಿರ್ವಹಣೆಯ ಹಲವು ಉಪಯುಕ್ತ ಸಂಗತಿಗಳನ್ನು ಕಲಿಯಲು ಸಾಧ್ಯ. ಸಮೃದ್ಧ ನೀರಿನ ಕೆರೆಯಿದ್ದರೂ ಇವರು ಜಲಸಂರಕ್ಷಣೆಗೆ ಒತ್ತು ನೀಡಿರುವುದು, ಕೃಷಿಯಲ್ಲಿ ದೂರದೃಷ್ಟಿ ಅಗತ್ಯ ಎಂಬುದನ್ನು ಎತ್ತಿ ತೋರಿಸುತ್ತದೆ.
ಅಡ್ಡೂರು ಕೃಷ್ಣ ರಾವ್