Advertisement

ರಾಸುಗಳ ರಕ್ಷಣೆಗೆ ಚಿಪ್‌ ಅಳವಡಿಕೆ

06:10 AM Nov 15, 2018 | Team Udayavani |

ಬೆಂಗಳೂರು :ರಾಜ್ಯದಲ್ಲಿ ರಾಸುಗಳಿಗೆ ಬರಬಹುದಾದ ರೋಗ ಪತ್ತೆ ಹಚ್ಚಲು ಚಿಪ್‌ ಅಳವಡಿಸುವುದಾಗಿ ಪಶು ಸಂಗೋಪನೆ ಸಚಿವ ನಾಡಗೌಡ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 1.3 ಕೋಟಿ ರಾಸುಗಳಿದ್ದು ಆ ಪೈಕಿ 80 ಲಕ್ಷ ಹಾಲು ಕರೆಯುವ ಹಸುಗಳಿಗೆ ಚಿಪ್‌ ಅಳವಡಿಸಲಾಗುತ್ತಿದ್ದು ಇದುವರೆಗೂ 56 ಲಕ್ಷ ಹಸುಗಳಿಗೆ ಚಿಪ್‌ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದರು.

80 ಲಕ್ಷ ಹಸುಗಳಿಗೂ ಚಿಪ್‌ ಅಳವಡಿಸಲು ಯೋಜನೆ ರೂಪಿಸಲಾಗಿದ್ದು ಪ್ರತಿ ಚಿಪ್‌ಗೆ 6.20 ರೂ. ವೆಚ್ಚವಾಗಲಿದೆ. ಚಿಪ್‌ ಅಳವಡಿಕೆಯಿಂದ ಕಾಲುಬಾಯಿ ರೋಗ ಸೇರಿ ರಾಸುಗಳ ರೋಗ ಪತ್ತೆ ಹಾಗೂ  ಅಕ್ರಮ ಸಾಗಾಟ ಹಾಗೂ ಮಾರಾಟ, ಪಶುಭಾಗ್ಯ ಯೋಜನೆಯ ದುರುಪಯೋಗ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳಿಗೆ ಮೇವು ಪೂರೈಕೆಗೆ 15 ಕೋಟಿ ರೂ. ಮೀಸಲಿಡಲಾಗಿದ್ದು ಬೇರೆ ರಾಜ್ಯಗಳಿಗೆ ಮೇವು ಸಾಗಣೆ ನಿರ್ಬಂಧಿಸಲಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರಿನಲ್ಲಿ ಭತ್ತ ಕಟಾವು ನಂತರ ಅದರ ಹುಲ್ಲು ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮೇವು ಬೆಳೆಸಲು ಕಿಟ್‌ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಗತ್ಯವಿರುವಷ್ಟು ಮಾಂಸ ಪೂರೈಕೆಗೆ ಕುರಿ ತಳಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.  ಪಶು ಭಾಗ್ಯ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಸಿರಾ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಮಾಂಸದ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೋವಾ ಸರ್ಕಾರ ಕರ್ನಾಟಕದ ಮೀನಿಗೆ ನಿಷೇಧಗೊಳಿಸಿರುವ ವಿಚಾರದ ಬಗ್ಗೆ ಅಲ್ಲಿನ ಸರ್ಕಾರದ ಜತೆ ಚರ್ಚಿಸಲಾಗುವುದು. ಸಂಪೂರ್ಣವಾಗಿ ನಿಷೇಧ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ರೈತರಿಂದ ಬೆಂಬಲ ಬೆಲೆಯಡಿ ಭತ್ತ 75 ಕೆಜಿ ಬ್ಯಾಗ್‌ಗೆ 1700 ರೂ. ದರದಲ್ಲಿ ಖರೀದಿ ಮಾಡಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲಾಗುವುದು. ರೈತರಿಗೆ ನ್ಯಾಯಯುತ ಬೆಲೆ ಸಿಗಲಿದೆ ಎಂದು ಹೇಳಿದರು.

ಹಾಲು ಬೆಲೆ ಹೆಚ್ಚಳ ಇಲ್ಲ
ರಾಜ್ಯದಲ್ಲಿ ಹಾಲು ಮಾರಾಟ ದರ ಅಥವಾ ಖರೀದಿ ದರ ಹೆಚ್ಚಿಸುವ ಪ್ರಸ್ತಾವನೆಯೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ, ಹೀಗಾಗಿ, ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತರಣೆ, ಉಪ  ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಂದಿನಿ ಹಾಲು ಶುದ್ಧವಾಗಿದ್ದು ಯಾವುದೇ ಪ್ರಯೋಗಾಲಯದಲ್ಲಿ ಅದನ್ನು ಸಾಬೀತುಪಡಿಸಲು ಸಿದ್ಧ. ನಾಟಿ ಹಸು ಹಾಲಿಗೆ ಬೇಡಿಕೆ ಇರುವುದರಿಂದ ಹಾಲು ಸಂಗ್ರಹ ಸಂದರ್ಭದಲ್ಲಿ ಪ್ರತ್ಯೇಕ ಸಂಗ್ರಹ ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ವೆಂಕಟರಾವ್‌ ನಾಡಗೌಡ, ಪಶು ಸಂಗೋಪನೆ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next