Advertisement
ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಸರಕಾರದ ಸಮನ್ವಯ ಶಿಕ್ಷಣ ಯೋಜನೆಯಡಿ ನೇರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ 347 ವಿಶೇಷ ಸಂಪನ್ಮೂಲ ಶಿಕ್ಷಕರು ಸೇವಾ ಭದ್ರತೆ ಇಲ್ಲದೇ ಸರಕಾರ ನೀಡುವ ವೇತನದ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ.
Related Articles
Advertisement
ರಾಜ್ಯದಲ್ಲಿದ್ದಾರೆ 347 ವಿಶೇಷ ಸಂಪನ್ಮೂಲ ಶಿಕ್ಷಕರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪುರಸ್ಕೃತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ರಾಜ್ಯದ ವಿಜಯನಗರ ಹಾಗೂ ಬಳ್ಳಾರಿ-34, ಬೆಳಗಾವಿ 14, ಬೆಂಗಳೂರು 26, ಧಾರವಾಡ 5, ಬಾಗಲಕೋಟೆ 6. ಗದಗ 14 ಹೀಗೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 347 ಜನರು ನೇರಗುತ್ತಿಗೆ ಮೂಲಕ ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಈ ಶಿಕ್ಷಕರನ್ನು ಪ್ರತಿ ವರ್ಷ ಮೇ 31ರಂದು ಬಿಡುಗಡೆ ಮಾಡಿ ಜೂನ್ 1 ರಂದು ಪುನಃ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಆಗಸ್ಟ್ ಬಂದರೂ ನೇಮಕಾತಿ ಆದೇಶ ನೀಡಿಲ್ಲ.
ಕುಟುಂಬ ನಿರ್ವಹಣೆ ಕಷ್ಟ: ಪ್ರಾಥಮಿಕ ಹಂತದ ಶಿಕ್ಷಕರಿಗೆ ಮಾಸಿಕ 20 ಸಾವಿರ ರೂ., ಪ್ರೌಢಹಂತದ ವಿಶೇಷ ಶಿಕ್ಷಕರಿಗೆ ಮಾಸಿಕ 25 ಸಾವಿರ ವೇತನ ನೀಡಲಾಗುತ್ತಿದೆ. ಅಲ್ಲದೇ ಈ ವೇತನ ಎರಡೂ¾ರು ತಿಂಗಳಿಗೊಮ್ಮೆ ಕೊಡುವುದರಿಂದ ಶಿಕ್ಷಕರಿಗೆ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಈಗಾಗಲೇ ಈ ಶಿಕ್ಷಕರಲ್ಲಿ ಬಹುತೇಕರು 45 ವಯಸ್ಸು ಮೀರಿದವರಿದ್ದು, ಇನ್ನೇನು 10-12 ವರ್ಷ ಕೆಲಸ ಮಾಡಿದರೆ ಅವರು ಸಹ ನಿವೃತ್ತಿಯಾಗುತ್ತಾರೆ. ಕಳೆದ ವರ್ಷ 5-6 ಜನರು 60 ವರ್ಷ ವಯಸ್ಸಾಗಿದ್ದರಿಂದ ನಿವೃತ್ತಿಯಾಗಿದ್ದಾರೆ. ಇದರಿಂದ ಈಗಿರುವ ವಿಶೇಷ ಸಂಪನ್ಮೂಲ ಶಿಕ್ಷಕರಿಗೂ ಅಭದ್ರತೆ ಕಾಡುತ್ತಿದ್ದು, ಕಾಲ ಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ಸೇವಾ ಭದ್ರತೆ ನೀಡಿ ಸೇವೆಯನ್ನು ಕಾಯಂ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ರಾಜ್ಯದಲ್ಲಿ ಕಳೆದ 20 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ನಮಗೆ ಯಾವುದೇ ಭದ್ರತೆ ಇಲ್ಲ. ವೇತನ ಹೆಚ್ಚಳ ಇಲ್ಲ. ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಮಾನವೀಯತೆಯಿಂದ ಸೇವೆಯನ್ನು ಪರಿಗಣಿಸಿ ಕಾಯಂಗೊಳಿಸಬೇಕು. –ತಿಮ್ಮೇಶ ಎಚ್, ಪ್ರಕಾಶ ಪೂಜಾರ, ಶಿವುಕುಮಾರ, ಶಶಿಧರ ಚಳಗೇರಿ, ಹನಮಂತ ಕಡಿವಾಲ, ಶಿಕ್ಷಕರ ಸಂಘದ ಮುಖಂಡರು
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೇರಗುತ್ತಿಗೆ ವಿಶೇಷ ಸಂಪನ್ಮೂಲ ಶಿಕ್ಷಕರ ಮಾಹಿತಿಯನ್ನು ಸರಕಾರಕ್ಕೆ ಕಳುಹಿಸಲಾಗುತ್ತಿದೆ. ಸರಕಾರ ಭದ್ರತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. – ಬಿ.ಬಿ.ಕಾವೇರಿ, ರಾಜ್ಯ ಯೋಜನಾ ನಿರ್ದೇಶಕಿ, ಎಸ್.ಎಸ್.ಕೆ.ಬೆಂಗಳೂರು
ಮಲ್ಲಿಕಾರ್ಜುನ ಕಲಕೇರಿ