ಧಾರವಾಡ: ಜಿಲ್ಲೆಯ ವಿವಿಧ ತಾಲೂಕಿನ ಸೀಮಿತ ಪ್ರದೇಶಗಳಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಗೆ ಹೊಸ ಪ್ರಬೇಧದ ಸೈನಿಕ ಹುಳು (ನ್ಪೋಡೆಪ್ಟರಾ ಫ್ರು ಜಿಪೆರ್ಡಾ) ಕೀಟಬಾಧೆ ಕಾಣಿಸಿಕೊಂಡಿದ್ದು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹುಳು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮತ್ತು ಕೃಷಿ ವಿಜ್ಞಾನಿಗಳ ಸಭೆಯಲ್ಲಿ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳದ ಬಿತ್ತನೆಯಾಗಿದೆ. ಜೂನ್ ಅಂತ್ಯದಲ್ಲಿ ಮತ್ತು ಸೆಪ್ಟಂಬರ್ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆಯ ಶೇ.5ರಿಂದ 10ರಷ್ಟು ಬೆಳೆಯಲ್ಲಿ ಈ ಹೊಸ ಪ್ರಬೇಧದ ಸೈನಿಕ ಹುಳು ಪತ್ತೆಯಾಗಿದೆ. ಹೀಗಾಗಿ ರೈತರು ಕೃಷಿ ಇಲಾಖೆ ಹಾಗೂ
ವಿಜ್ಞಾನಿಗಳ ಸಲಹೆ ಮೇರೆಗೆ ಜಾಗೃತಿ ವಹಿಸಬೇಕು ಎಂದರು.
ರೈತರಿಗೆ ಮಾಹಿತಿ: ಈಗಾಗಲೇ ಈ ಕೀಟಬಾಧೆ ಕುರಿತು ಜನ ಜಾಗೃತಿಗಾಗಿ ಕ್ರಮಕೈಗೊಳ್ಳಲಾಗಿದೆ. ರೈತರಿಗೆ ನೇರವಾಗಿ ಹುಳು ಬಾಧೆ ಹಾಗೂ ಅದರ ನಿಯಂತ್ರಣ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿರುವ ವಿಜ್ಞಾನಿಗಳು ನೀಡುತ್ತಿದ್ದಾರೆ. ಪಾಲ್ ಸೈನಿಕ ಹುಳು ನಿಯಂತ್ರಣ ಮತ್ತು ನಿಮೂರ್ಲನೆಗೆ ರಾಸಾಯನಿಕ ಮತ್ತು ಜೈವಿಕ ಕೀಟನಾಶಕಗಳು ಲಭ್ಯವಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರಿಗೆ ಶೇ.50 ರಿಯಾಯತಿ ದರದಲ್ಲಿ ಇದನ್ನು ವಿತರಿಸಲಾಗುವುದು. ರೈತರು ಮುಂಜಾಗ್ರತೆ ವಹಿಸಿ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮುಖ್ಯವಾಗಿ ನವಲಗುಂದ ತಾಲೂಕಿನ ಬೆಳವಟಗಿ, ಗೊಬ್ಬರಗುಂಪಿ, ಶಾನವಾಡ, ಹಾಳಕುಸುಗಲ್ಲ, ಶಿಶ್ವಿನಾಳ, ಗುಡಿಸಾಗರ, ಅಳಗವಾಡಿ, ಪಡೆಸೂರು, ಹುಬ್ಬಳ್ಳಿ ತಾಲೂಕಿನ
ಛಬ್ಬಿ ಹೋಬಳಿ, ಧಾರವಾಡ ತಾಲೂಕಿನ ಗರಗ, ಧಾರವಾಡ, ಅಳ್ನಾವರ, ಅಮ್ಮಿನಬಾವಿ ಹೋಬಳಿಗಳು ಮತ್ತು ಕುಂದಗೊಳ ತಾಲೂಕಿನ ಕುಂದಗೋಳ, ಸಂಶಿ ಹೋಬಳಿಯ ಗ್ರಾಮಗಳಲ್ಲಿನ ಶೇ.5ರಿಂದ 10ರಷ್ಟು ಮೆಕ್ಕೆಜೋಳ ಪ್ರದೇಶದಲ್ಲಿ ಹೊಸ ಪ್ರಬೇಧದ ಸೈನಿಕರ ಹುಳು (ನ್ಪೋಡೆಪ್ಟರಾ ಫ್ರುಜಿಪೆರ್ಡಾ) ಕೀಟಬಾಧೆ ಕಾಣಿಸಿಕೊಂಡಿದ್ದು, ಸಮಗ್ರ ನಿರ್ವಹಣೆ ಮೂಲಕ ಹುಳು ಹತೋಟಿ ಮಾಡಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ| ಎಸ್. ಎನ್ ಜಾಧವ ಅವರು, ಪಾಲ್ ಸೈನಿಕ ಹುಳುವಿನ ಜೀವನಚಕ್ರ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಕೃಷಿ ಇಲಾಖೆಯ ಉಪನಿರ್ದೇಶಕ ಪಿ.ಎನ್. ಪಾಟೀಲ, ಕೃವಿವಿಯ ವಿಸ್ತರಣಾ ಸಹ ನಿರ್ದೇಶಕ ಡಾ| ಚನ್ನಪ್ಪಗೌಡ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಪಾಲ್ಗೊಂಡಿದ್ದರು.
ಮೆಕ್ಕೆಜೋಳ ಹಾಕಿದ 35ರಿಂದ 45 ದಿನದೊಳಗೆ ಈ ರೋಗ ಬಾಧೆ ಬೆಳೆಯಲ್ಲಿ ಕಾಣಿಸುತ್ತದೆ. ರೈತರು ಕೀಟನಾಶಕ ಬಳಸಿ ಇದನ್ನು ನಿಯಂತ್ರಿಸಬಹುದು. ಮೆಕ್ಕೆಜೋಳ ಪ್ರದೇಶದಲ್ಲಿ ಹೊಸ ಪ್ರಬೇಧದ ಸೈನಿಕರ ಹುಳು (ನ್ಪೋಡೆಪ್ಟರಾ ಫ್ರುಜಿಪೆರ್ಡಾ) ಕೀಟಬಾಧೆ ಕಾಣಿಸಿಕೊಂಡಿದ್ದು, ಸಮಗ್ರ ನಿರ್ವಹಣೆ ಮೂಲಕ ಹುಳು ಹತೋಟಿ ಮಾಡಬೇಕು.
ಟಿ.ಎಸ್. ರುದ್ರೇಶಪ್ಪ,
ಕೃಷಿ ಇಲಾಖೆ ಜಂಟಿ ನಿರ್ದೇಶಕ