Advertisement

ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ ಶಾಸನ

12:39 PM Oct 15, 2019 | Suhan S |

ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಗತಕಾಲದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ ಸಾರುವ ಪ್ರಾಚೀನ ದೇವಾಲಯಗಳು, ಶಾಸನಗಳು, ವೀರಗಲ್ಲುಗಳು, ಮೂರ್ತಿಗಳು ಶಿಥಿಲಗೊಂಡು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಅನಾಥವಾಗಿವೆ.

Advertisement

ಮೌಡ್ಯತೆಯಿಂದ ಶಾಸನಗಳ-ವೀರಗಲ್ಲುಗಳ ಮೇಲೆ ಜನರು ಇಂದಿಗೂ ಸುಣ್ಣ-ಬಣ್ಣ ಬಳಿಯುತ್ತಿದ್ದು, ದೇವರೆಂಬ ಕಾರಣಕ್ಕೆ ಎಣ್ಣೆ ಸುರಿದು ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುತ್ತಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿರುವ ಶಾಸನ, ಅಪರೂಪದ ಕಲ್ಲುಗಳು ತಿಪ್ಪೆಗುಂಡೆ, ರಸ್ತೆಯ ಬದಿ, ಅಗಸಿ ಬಾಗಿಲು, ದೇವಸ್ಥಾನಗಳ ಮುಂಭಾಗದಲ್ಲಿ ಅನಾಥವಾಗಿ ಬಿದ್ದಿವೆ.

ಅವ್ವಗೆರೆ (ಅಬ್ಬಿಗೇರಿ)ಯಲ್ಲಿ ಈವರೆಗೆ 11 ಮಹತ್ವದ ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 1113ರ ಶಾಸನ ಅತ್ಯಂತ ಹಳೆಯದಾಗಿದೆ. ಮಹಾಮಂಡಳೇಶ್ವರ ಸಿಂಧ ಅರಸರು ಅಬ್ಬಿಗೆರೆಯ ದೇವೆಂಗೆರೆ 24 ಮತ್ತರು ಭೂ ದಾನವನ್ನು, ಅವನ ರಾಣಿ ದೇವುಲದೇವಿ ಚನ್ನಕೇಶವ ದೇವರಿಗೆ ಬಿಟ್ಟ ಹೂದೋಟ ಗಾಣದ ಮನೆಯನ್ನು ತಿಳಿಸುತ್ತದೆ.

ಇಲ್ಲಿಯವರೆಗೂ ದೊರೆತ ಶಾಸನಗಳು: ಗ್ರಾಮದ ಸುಟ್ಟ ಬಸಪ್ಪನ ದೇವಸ್ಥಾನ ಮುಂದಿರುವ 1125ರ ಶಾಸನ ಸೋಮೇಶ್ವರ ದೇವರಿಗೆ ಅಬ್ಬಿಗೇರಿಯ ಅರವಲ್ಕಾಕು ದಾನ ಮಾಡಿದ್ದನ್ನು ದಾಖಲಿಸಿದೆ. 1174ರ ಶಾಸನ ಮಾಣಿಕೇಶ್ವರ, ಕಪ್ಪತ್ತೇಶ್ವರ, ದೇವರಿಗೆ ಆರನೇ ವಿಕ್ರಮಾ ದಿತ್ಯ ದಾನ ಮಾಡಿರುವುದು, ಕಲಚೂರಿ ಬಿಜ್ಜಳನ ಕಾಲದ ಶಾಸನ ಇಲ್ಲಿನ ಮೂಲಸ್ಥಾನ ದೇವರಿಗೆ ದಾನ ಮಾಡಿರುವುದು, ಕ್ರಿ.ಶ. 1541ರ ಶಾಸನ ಹೊನ್ನಾಪೂರದ ಯುದ್ಧದ ಸ್ಮಾರಕವಾಗಿದೆ. ಕ್ರಿ.ಶ.17ರ ಶತಮಾನದ ಶಾಸನ ಧರ್ಮ ಏತಕ್ಕೆಂದು ಬರಗೆಯರ ಮಹಾದೇವ ನಾಯಕರು ದಾನ ಬಿಟ್ಟ ಅಂಶವನ್ನು ತಿಳಿಸುತ್ತದೆ.

ಐತಿಹಾಸಿಕ ಜ್ಯೋತಿರ್ಲಿಂಗ ದೇವಸ್ಥಾನವು ಕಲ್ಯಾಣ ಚಾಲುಕ್ಯರ ಕಾಲಕ್ಕೆ ರಚನೆಯಾಗಿದೆ. ಪ್ರಸ್ತುತ ಇದಕ್ಕೆ ಸುಣ್ಣ ಬಳಿದು ಹಿಂದಿನ ವೈಭವ ವನ್ನು ವಿರೂಪಗೊಳಿಸಲಾಗಿದೆ. ಉಡಚವ್ವನ ಗುಡಿಯ ಬಳಿ 10ನೇ ಶತಮಾನದ ಮುಕ್ಕಾದ ಚಾಮುಂಡಿ ಶಿಲ್ಪವಿದೆ. ಶಾಸನದ ಮೇಲೆ ಲಲಿತಾಸನದಲ್ಲಿ ಕುಳಿತಿರುವ ದೇವಿಯ ಕೆತ್ತನೆ ಆಕರ್ಷಕವಾಗಿದೆ. ಗ್ರಾಮದ ಉದ್ದಗಲಕ್ಕೋ ವೀರಗಲ್ಲುಗಳು ಭಗ್ನಾವಶೇಷಗಳು ಹರಡಿಕೊಂಡಿವೆ.

Advertisement

ಮುಂದಿನ ದಿನಗಳಲ್ಲಿ ಸಂರಕ್ಷಣೆ:  ಸಂಬಂಧಿಸಿದ ಪುರಾತತ್ವ ಮತ್ತು ಪ್ರಾಚ್ಯವಸ್ತು ಹಾಗೂ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ಸಭೆ ನಡೆಸಿ, ಶಾಸನ, ಮೂರ್ತಿ, ವೀರಗಲ್ಲುಗಳ ಬಗ್ಗೆ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಅವುಗಳ ಸಂರಕ್ಷಣೆ ಮಾಡಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಹೇಳಿದರು.

ಸಂಗ್ರಹಿಸಿ-ಸಂರಕ್ಷಿಸಿ: ಅಮೂಲ್ಯ ಐತಿಹಾಸಿಕ ಶಿಲ್ಪಕಲಾ ವೈಭವ ಹೊಂದಿರುವ ಗ್ರಾಮದ ಈಶ್ವರ ದೇವಸ್ಥಾನ, ಶಾಸನ, ಮೂರ್ತಿಗಳು, ವೀರಗಲ್ಲುಗಳಿವೆ. ಇವು ಕೂಡ ಕಾಲಗರ್ಭದಲ್ಲಿ ಲೀನವಾಗುವ ಹಂತ ತಲುಪುತ್ತಿವೆ. ಗ್ರಾಮದ ರೋಣದ ರಸ್ತೆಯಲ್ಲಿರುವ ವಿರುಪಾಕ್ಷ ದೇವಸ್ಥಾನ ಹತ್ತಿರ ಇವುಗಳನ್ನು ಸಂಗ್ರಹಿಸಿ ಒಂದು ಉದ್ಯಾನ ನಿರ್ಮಿಸಬೇಕೆಂದು ಉಪನ್ಯಾಸಕ ಬಸವರಾಜ ಪಲ್ಲೇದ ಆಗ್ರಹಿಸಿದ್ದಾರೆ.

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next