Advertisement

ಮೂಡುತೋನ್ಸೆ: ಇಮ್ಮಡಿ ದೇವರಾಯನ ಶಿಲಾಶಾಸನ ಪತ್ತೆ

01:05 PM May 08, 2022 | Team Udayavani |

ಕಾಪು: ಕಲ್ಯಾಣಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು – ನಿಡಂಬಳ್ಳಿಯಲ್ಲಿ ಬರುವ ಮುದಲಕಟ್ಟ ಪ್ರದೇಶದ ಗುಂಡು ಶೆಟ್ಟಿಯವರ ಜಾಗದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನವು ಪತ್ತೆಯಾಗಿದೆ.

Advertisement

ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಇದರ ಅಧ್ಯಯನ ನಿರ್ದೇಶಕ ಎಸ್‌. ಎ. ಕೃಷ್ಣಯ್ಯ ಮತ್ತು ಯು. ಕಮಲಾ ಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ ಭಟ್‌ ಇವರ ನೇತ್ರತ್ವದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.

ಗ್ರಾನೈಟ್‌ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕನ್ನಡ ಲಿಪಿಯ 24 ಸಾಲುಗಳನ್ನು ಒಳಗೊಂಡಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಶಾಸನದ ಬಹು ಭಾಗವು ಸಂಪೂರ್ಣವಾಗಿ ಸವೆದು ಹೋಗಿದೆ. ಶ್ರೀ ಗಣಾಧಿಪತೆಯೇ ನಮಃ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕ ವರುಷ 1353 ರ (ಕ್ರಿ.ಶ 1431) ವಿರೋಧಿಕೃತ ಸಂವತ್ಸರಕ್ಕೆ ಸೇರಿದೆ.

ಬಾರಕೂರು ನಾಡಿನಲ್ಲಿ ಇಮ್ಮಡಿ ದೇವರಾಯನ ನಿರೂಪದಿಂದ ಮಹಾ ಪ್ರಧಾನ ಚಂಡರಸ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟದಲ್ಲಿ ದೇವರ ಪರ್ವದ ಮೂರು ದಿನದ ಹಬ್ಬಕ್ಕೆ ದಾನ ನೀಡಿರುವುದು ಶಾಸನದಿಂದ ತಿಳಿದು ಬರುತ್ತದೆ. ಈ ದಾನಕ್ಕೆ ಮಂಜಣ್ಣ ಸೆಟ್ಟಿ ಹಾಗೂ ಆತನ ಅಳಿಯ ಕೋಮ ಸೆಟ್ಟಿಯ ಒಪ್ಪ, ಬ್ರಹ್ಮರ ಊರು ಏಳು ಮಂದಿಯ ಒಪ್ಪ, ಕಂಚಿಯ ಕಬ್ಬೆಯ ಹೊಣೆಯನ್ನು ಉಲ್ಲೇಖೀಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು. ಈ ಶಾಸನವು ತ್ರುಟಿತಗೊಂಡಿರುವುದರಿಂದ ಯಾವ ದೇವರ, ಯಾವ ಪರ್ವದ ಹಬ್ಬಕ್ಕೆ ದಾನ ನೀಡಿರುವುದು ಎಂಬುವುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಕ್ಷೇತ್ರ ಕಾರ್ಯ ಶೋಧನೆಯ ವೇಳೆ ಆನಂದ ಬಂಗೇರ ಹಾಗೂ ಸ್ಥಳೀಯರು ಸಹಕಾರ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next