ಉಡುಪಿ: ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿರುವ ಶನೈಶ್ಚರ ದೇವಸ್ಥಾನದ ಬಳಿ ಉಬ್ಬು ಚಿತ್ರವಿರುವ ಶಾಸನ ಪತ್ತೆಯಾಗಿದೆ.
ನಿರ್ಪುಗಲ್ಲು ಎಂದು ಹೇಳುವ ಈ ಶಾಸನ ಸುಮಾರು ಒಂದುವರೆ ಅಡಿ ಅಗಲ ನಾಲ್ಕು ಅಡಿ ಎತ್ತರವಿದೆ. ಈ ಶಾಸನದ ಬಲಭಾಗದಲ್ಲಿ ಚಂದ್ರ, ಎಡ ಭಾಗದಲ್ಲಿ ಸೂರ್ಯ, ಮಧ್ಯಭಾಗದಲ್ಲಿ ಪೀಠ ಇರುವ ಶಿವಲಿಂಗದ ಕೆಳಗೆ ಮಾನವವೀರ ಪುರುಷನಂತೆ ಖಡ್ಗ ಮತ್ತು ಗುರಾಣಿ ಹಿಡಿದಿರುವಂತೆ ವಸ್ತ್ರ ಸಹಿತ (ಚಲ್ಲಣಹಾಕಿದಂತೆ) ಕಂಡು ಬಂದಿದೆ.
ಓರೆಮುಖ ಎತ್ತರಕ್ಕೆ ಮಾಡಿ ಎಡಗಾಲು ಎತ್ತಿಕೊಂಡು ವೀರ ಪುರುಷನಂತೆ ನಿಂತಿರುವ ಉಬ್ಬುಶಿಲ್ಪ ಕಂಡುಬಂದಿದೆ. ಈ ಶಾಸನ ಇರುವ ಪಕ್ಕದಲ್ಲಿ ಉತ್ತರ ಕನ್ನಡ ಮಂದಿಬೀಡಾರ ಬಿಟ್ಟಿದ್ದಾರೆ. ಅವರು ಈ ಭಾಗದಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿ ಈ ಉಬ್ಬು ಶಾಸನದಲ್ಲಿರುವ ಚಿತ್ರವನ್ನು ಹನುಮನೆಂದು ತಿಳಿದು ದಿನನಿತ್ಯ ಪೂಜೆ ಮಾಡುತ್ತಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ಮೂಡನಿಡಂಬೂರಿಗೆ ನೆರೆಹಾವಳಿ ಸಂಭವಿಸಿದಾಗಲೂ ಇದರ ಸ್ವಲ್ಪ ತಲೆಭಾಗ ದೂರದಿಂದ ಕಾಣುತ್ತಿತ್ತು ಎನ್ನುತ್ತಾರೆ. ಪಕ್ಕದಲ್ಲಿ ಮೂಡನಿಂಡಬೂರು ಬ್ರಹ್ಮ ಬೈದರ್ಕಳ ಗರೋಡಿ ಇದೆ. ಈ ಬಗ್ಗೆ ಹಿರಿಯನ್ನು ವಿಚಾರಿಸಿದಾಗ ದೈವವು ಸಂಚಾರ ಹೋಗುವಾಗ ದೊಂದಿ ಬೆಳಕನ್ನು ಅಲ್ಲಿ ಇಟ್ಟು ವಿಧಿ ವಿಧಾನಗಳನ್ನು ಮಾಡಿ ಅನಂತರ ಮುಂದಿನ ಕಡೆಗೆ ಸಂಚರಿಸುವ ಪದ್ಧತಿ ಇತ್ತು ಎನ್ನುತ್ತಾರೆ.
ಸ್ಥಳೀಯರಾದ ಸುಭಾಷ್ ಪೂಜಾರಿ, ಹರೀಶ್ ಪೂಜಾರಿ, ಜಯಶೆಟ್ಟಿ ಬನ್ನಂಜೆ, ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.